ತುಮಕೂರು | ತುಮಕೂರು ನಗರದಲ್ಲಿ ಜೆಡಿಎಸ್ ಪಕ್ಷದಿಂದ ಬಂಡಾಯವೆದ್ದು ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ನರಸೇಗೌಡ ಅವರು ತುಮಕೂರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ತುಮಕೂರು ನಗರದ ಜನರಲ್ಲಿ ಮತಯಾಚನೆ ಮಾಡಿದರು.
ಈ ವೇಳೆಯಲ್ಲಿ ಮಾತನಾಡಿದ ಅವರು, ನಾನು ಯಾರನ್ನು ಸೋಲಿಸಲು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಗೆಲ್ಲಲು ಚುನಾವಣಾ ಅಖಾಡಕ್ಕೆ ಇಳಿದಿದ್ದೇನೆ. ಇಷ್ಟು ವರ್ಷಗಳು ಬೇರೆಯವರಿಗಾಗಿ ಸುದ್ದಿಗೋಷ್ಠಿಯನ್ನು ನಡೆಸುತ್ತಿದೆ. ಆದರೆ ಈ ಬಾರಿ ನನಗೋಸ್ಕರ ಸುದ್ದಿಗೋಷ್ಠಿಯನ್ನು ಮಾಡುತ್ತಿದ್ದೇನೆ ಎಂದು ಹೇಳಿದರು.
ಸಣ್ಣ ಸಣ್ಣ ಗುತ್ತಿಗೆದಾರನಾಗಿ ಕೆಲಸ ಮಾಡಿಕೊಂಡು ಸಮಾಜ ಸೇವೆ ಮಾಡುತ್ತಾ ರಾಜಕೀಯಕ್ಕೆ ಬಂದಿದ್ದೇನೆ. ಸುಮಾರು ಎರಡು ದಶಕಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ಆದರೆ ಆ ಪಕ್ಷದಲ್ಲಿ ನನಗೆ ಬಿ ಫಾರಂ ತೆಗೆದುಕೊಳ್ಳುವ ಯೋಗ ಇಲ್ಲವೇನೋ ಅನಿಸುತ್ತೆ ಎಂದು ಪರೋಕ್ಷವಾಗಿ ಜೆಡಿಎಸ್ ಪಕ್ಷದ ಮೇಲೆ ಬೆಟ್ಟು ಮಾಡಿ ತೋರಿಸಿದರು.
ನಾನು ಗುತ್ತಿಗೆದಾರನಾಗಿ ಕೆಲಸ ಮಾಡಿದ್ದೇನೆ ಹೀಗಾಗಿ ಎಲ್ಲಾ ಇಲಾಖೆಗಳ ಪರಿಚಯ ನನಗೆ ಇದೆ. ತುಮಕೂರಿನ ಜನರಿಗೆ ನೀರನ್ನು ಒದಗಿಸುವುದಕ್ಕೆ ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ, ಸರ್ಕಾರಿ ಶಾಲೆಗಳನ್ನು ಉನ್ನತಿಕರಿಸಲು, ಕೈಗಾರಿಗಳ ಅಭಿವೃದ್ಧಿಗಾಗಿ ತುಮಕೂರು ನಗರದ ಜನ ನನ್ನನ್ನು ಆಶೀರ್ವದಿಸಬೇಕು ಎಂದರು.
ನಾನು ಯಾರನ್ನು ದೋಷಿಸುವುದಿಲ್ಲ, ನನಗೆ ಯಾರೂ ನಾಮಪತ್ರ ವಾಪಸು ಪಡೆಯಿರಿ ಎಂದು ಹೇಳಿಲ್ಲ. ರ್ಯಾಲಿಗೆ ಬನ್ನಿ ಎಂದಷ್ಟೇ ಹೇಳಿದ್ದರು ಎಂದು ಮನೆಗೆ ಬಂದು ಗೋವಿಂದರಾಜು ಮತ್ತು ಗೌರಿಶಂಕರ್ ಮಾತನಾಡಿಕೊಂಡು ಹೋದರ ಬಗ್ಗೆ ಸ್ಪಷ್ಟನೆ ನೀಡಿದರು.
ಇನ್ನು ತುಮಕೂರು ನಗರದಲ್ಲಿ ಸಾಕಷ್ಟು ಸದ್ದು ಮಾಡಿದ್ದ ಅಟ್ಟಿಕಾ ಬಾಬು ಪರ ಇದ್ದ ನರಸೇಗೌಡರು ಇದೀಗ ಅವರ ಸಹಾಯವನ್ನು ಪಡೆದುಕೊಳ್ಳುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ಯಾವಾಗಲೂ ನನ್ನ ಬೆಂಬಲಕ್ಕೆ ಇರುತ್ತಾರೆ ಎಂದು ಹೇಳಿದರು.
ಯಾವ ಪಕ್ಷದವರು ತುಮಕೂರಿನಲ್ಲಿ ಒಕ್ಕಲಿಗರಿಗೆ ಟಿಕೆಟ್ ಕೊಟ್ಟಿಲ್ಲ, ನನ್ನ ದುಡಿಮೆಗೆ ಪ್ರತಿಫಲ ಸಿಕ್ಕಿಲ್ಲ, ಯಾರ ಹಂಗಿನಲ್ಲೂ ನಾನಿಲ್ಲ, ನಾನು ಯಾರನ್ನ ದೋಷಿಸಲು ಕೂಡ ಹೋಗುವುದಿಲ್ಲ ಎಂದು ಈ ವೇಳೆಯಲ್ಲಿ ಹೇಳಿದರು.