ತುಮಕೂರು | ಚುನಾವಣೆಗೂ ಮುನ್ನ ರಾಜ್ಯದ ಜನರಿಗೆ ಭರವಸೆ ನೀಡಿದ್ದ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ ನಂತರ ತುಮಕೂರಿಗೆ ಭೇಟಿ ನೀಡಿದ ಕೊರಟಗೆರೆ ಶಾಸಕ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾಧ್ಯಮಗಳೊಂದಿಗೆ ಮಾತನಾಡಿ ಜನಸ್ನೇಹಿ ಆಡಳಿತವನ್ನು ನಡೆಸುವ ಭರವಸೆಯನ್ನು ನೀಡಿದರು.
ಜನಸಾಮಾನ್ಯರು, ಬುದ್ಧಿಜೀವಿಗಳು, ಚಿಂತಕರ ತಲೆಯಲ್ಲಿ ಮೂಡಿರುವ ಪ್ರಶ್ನೆ ಎಂದರೆ ಅದು ಸಂಪನ್ಮೂಲಗಳ ಕ್ರೂಡೀಕರಣ ಹೇಗೆ ಮಾಡುತ್ತಾರೆ ಎಂದು. ಇದರಲ್ಲಿ ಯಾವುದೇ ರೀತಿಯಾದಂತಹ ಗೊಂದಲ ಬೇಡ ಆರ್ಥಿಕ ಹೊರೆಯಾಗದಂತೆ, ಅಭಿವೃದ್ಧಿ ಕುಂಠಿತವಾಗದಂತೆ, ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ ಅದಕ್ಕೆ ಬಳಸುವ ಹಣವನ್ನು ನಿಲ್ಲಿಸಿ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದರು.
ಯಾವ ಯಾವ ಇಲಾಖೆಗಳಲ್ಲಿ ಯಾವ ಯಾವ ಯೋಜನೆಗಳಲ್ಲಿ ಹಲವು ವರ್ಷಗಳಿಂದ ಬಳಕೆ ಆಗದೆ ಉಳಿದಿರುವಂತಹ ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುವುದರಿಂದ ಯಾವುದೇ ಹೊರೆ ಬೀಳುವುದಿಲ್ಲ, ಜನಸಾಮಾನ್ಯರಿಗೂ ಕೂಡ ಹೊರೆಯಾಗದಂತೆ ಯೋಜನೆಗಳನ್ನ ಜಾರಿಗೊಳಿಸುತ್ತೇವೆ ಎಂದು ತಿಳಿಸಿದರು.
ಈ ಹಿಂದೆ ಒಂದು ಜಿಲ್ಲಾ ಉಸ್ತುವಾರಿ ಪಟ್ಟಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಉತ್ತರ ನೀಡಿದ ಅವರು ಇದ್ಯಾವುದೂ ಕೂಡ ನನಗೆ ಗೊತ್ತಿಲ್ಲ. ಯಾವ ಜಿಲ್ಲೆಯನ್ನು ಉತ್ತುವರಿಯನ್ನಾಗಿ ಮಾಡಿದರು ನಿರ್ವಹಿಸುತ್ತೇನೆ. ಒಬ್ಬರನ್ನ ಒಂದೊಂದು ಜಿಲ್ಲೆ ಉಸ್ತುವಾರಿಯನ್ನಾಗಿ ಆಯ್ಕೆ ಮಾಡುತ್ತಾರೆ ಎಂದರೆ ಅದಕ್ಕೆ ಅದರದೇ ಆದಂತಹ ಕಾರಣಗಳು ಇರುತ್ತವೆ ಎಂದು ತಿಳಿಸಿದರು.
ಇನ್ನು ಎತ್ತಿನಹೊಳೆ ಯೋಜನೆಗೆ ಸಂಬಂಧಪಟ್ಟಂತೆ ಇನ್ನೆರಡು ವರ್ಷಗಳಲ್ಲಿ ಇದನ್ನು ಪೂರ್ಣಗೊಳಿಸುತ್ತೇವೆ. ಜುಲೈನಲ್ಲಿ ಬಜೆಟ್ ಮಂಡನೆ ಆಗಸ್ಟ್ ನಲ್ಲಿ ಹಣ ಬಿಡುಗಡೆಯಾಗುತ್ತದೆ. ಇದಕ್ಕೆ ಮತ್ತಷ್ಟು ವೇಗ ನೀಡುತ್ತೇವೆ. ರಾಜ್ಯದಲ್ಲಿ ಸುಮಾರು 15 ಸಾವಿರ ಕಾನ್ಸ್ಟೇಬಲ್ಗಳ ಹುದ್ದೆ ಖಾಲಿ ಇದೆ. ಇದಕ್ಕೆ ಅರ್ಜಿ ಹಾಕುತ್ತಿರುವವರು ಎಂರ, ಎಂಕಾಂ, ಎಂಬಿಎ, ಸೇರಿದಂತೆ ಉನ್ನತ ಮಟ್ಟದ ಶಿಕ್ಷಣ ಪಡೆದವರು. ಒಂದು ರೀತಿ ಖುಷಿ ಮತ್ತೊಂದು ರೀತಿಯಲ್ಲಿ ಇಂತಹ ಉನ್ನತ ಶಿಕ್ಷಣ ಪಡೆದವರು ಕಾನ್ಸ್ಟೇಬಲ್ಗಳ ಹುದ್ದೆಗೆ ಬರುತ್ತಿದ್ದಾರಲ್ಲ ಎಂದು ಬೇಸರ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಈ ಯೋಜನೆಗಳ ಅನುಷ್ಠಾನಕ್ಕೆ ಹಣ ಕ್ರೂಡೀಕರಣ ಮಾಡಲು ಪೊಲೀಸ್ ಇಲಾಖೆಗೆ ನಿಯಮ ಉಲ್ಲಂಘನೆ ಮಾಡಿದ ಜನಸಾಮಾನ್ಯರಿಗೆ ಹೆಚ್ಚುವರಿ ಫೈನ್ ಹಾಕಲು ಸೂಚನೆ ನೀಡಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆ ರೀತಿಯಾದಂತಹ ಯಾವುದೇ ಸೂಚನೆಗಳನ್ನು ನಾವು ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ಯೋಜನೆಗಳು ಲೋಕಸಭೆ ಚುನಾವಣೆಯವರೆಗೂ ಮಾತ್ರ ಎನ್ನುವಂತಹ ಮಾತುಗಳು ಕೇಳಿಬರುತ್ತಿವೆ. ಆದರೆ ಇದು ಸರ್ಕಾರ 5 ವರ್ಷಗಳವರೆಗೂ ನಡೆಯುತ್ತದೆ ಅಲ್ಲಿಯವರೆಗೂ ಕೂಡ ಈ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿರುತ್ತವೆ ಎಂದರು.
ಒಟ್ಟಾರಿಯಾಗಿ ಬಿಜೆಪಿ ಸರ್ಕಾರದ ಆಡಳಿತದಿಂದ ರೋಸಿ ಹೋಗಿದ್ದ ಜನಸಾಮಾನ್ಯರಿಗೆ ಇದೀಗ ಕಾಂಗ್ರೆಸ್ ಸರ್ಕಾರ ಉಚಿತ ಭರವಸೆಗಳ ಮೂಲಕ ಭರವಸೆ ಹುಟ್ಟಿಸಿದೆ. ಈ ಯೋಜನೆಗಳು ಎಷ್ಟು ದಿನಗಳವರೆಗೆ ಚಾಲ್ತಿಯಲ್ಲಿರುತ್ತವೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.