ಬೆಂಗಳೂರು ಗ್ರಾಮಾಂತರ | ಮೋಜು ಮಸ್ತಿ ಮಾಡಲು ಚಿನ್ನ ಹಾಗೂ ಮೊಬೈಲ್ ಕದಿಯುತ್ತಿದ್ದ ಕಳ್ಳರನ್ನು ಹೊಸಕೋಟೆ ಪೊಲೀಸರು ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು,, ಹೊಸಕೋಟೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ 7 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನ, 50 ಲಕ್ಷ ಮೌಲ್ಯದ ವಿವಿಧ ಕಂಪನಿಗಳ ಮೊಬೈಲ್ ಹಾಗೂ ರೂ. 1,40,000 ನಗದನ್ನು ವಶಪಡಿಸಿಕೊಂಡಿದ್ದಾರೆ.
ಬಸ್ಸುಗಳಲ್ಲಿ ಚಲಿಸುತ್ತಿದ್ದ ಮಹಿಳೆಯರು ಹಾಗೂ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಬುದ್ಧಿ ಮಾದ್ಯನಂತೆ ನಟಿಸಿ ಸುಮಾರು 150ಕ್ಕೂ ಹೆಚ್ಚು ವಿವಿಧ ಕಂಪನಿಗಳ ಮೊಬೈಲ್ ಕಳ್ಳತನ ಮಾಡಿದ್ದರು. ನಂತರ ಬೆಂಗಳೂರು, ಮೈಸೂರು, ಹೈದರಾಬಾದ್ ಗೆ ಪ್ರಯಾಣ ಮಾಡಿ ವಿಲಾಸಿ ಜೀವನ ನಡೆಸುತ್ತಿದ್ದರು. ಜೊತೆಗೆ ಕದ್ದ ಮೊಬೈಲ್ ಫೋನ್ ಬಳಸಿ ಫೋನ್ ಪೇ, ಗೂಗಲ್ ಪೇ ಮುಖಾಂತರ ಹಣ ಲಪಟಾಯಿಸಿ ವಿಲಾಸಿ ಜೀವನ ನಡೆಸುತ್ತಿದ್ದರು.
ಹೊಸಕೋಟೆ ನಗರದಾದ್ಯಂತ ಕಾಲ್ನಡಿಗೆ ಮುಖಾಂತರ ಹಾಗೂ ದ್ವಿಚಕ್ರ ವಾಹನದ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಾಮಾನ್ಯರಂತೆ ಚಲಿಸುತ್ತಿದ್ದ ಕಳ್ಳರು ಬೀಗ ಹಾಕಿರುವ ಮನೆಯ ಚಲನವಲನ ಗಮನಿಸುತ್ತಿದ್ದರು. ಮನೆಯಲ್ಲಿ ಯಾರೂ ಇಲ್ಲ ಎಂದು ಖಾತರಿಪಡಿಸಿಕೊಂಡು ರಾತ್ರಿ ಸಮಯದಲ್ಲಿ ಕಾರ್ಯಾಚರಣೆ ನಡೆಸಿ ಕಳ್ಳತನ ಮಾಡುತ್ತಿದ್ದರು.
ಸುಮಾರು 900 ಗ್ರಾಂ ಚಿನ್ನ ಕದ್ದು ಹೊಸಕೋಟೆ ಪೊಲೀಸರ ಕೈಗೆ ತಗಲಾಕಿಕೊಂಡ ಖತರ್ನಾಕ್ ಕಳ್ಳರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿಯುವಂತೆ ಮಾಡಿದ್ದಾರೆ ಪೊಲೀಸರು. ಒಟ್ಟಾರೆಯಾಗಿ ವಿಲಾಸಿ ಜೀವನ ಹಾಗೂ ಕಳ್ಳತನದಿಂದ ಜೀವನ ನಡೆಸುತ್ತಿದ್ದ ಕಳ್ಳರನ್ನು ಎಡೆಮುರಿ ಕಟ್ಟಿದ ಹೊಸಕೋಟೆ ಪೊಲೀಸರ ಕಾರ್ಯ ಶ್ಲಾಘನೀಯ.