ತುಮಕೂರು | ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಹಿಂಡಿಸಿಗೆರೆ ಗ್ರಾಮ ಪಂಚಾಯಿತಿ (Hindisigere Gram Panchayat) ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೊದಲನೇ ವಾರ್ಡಿನ ಸದಸ್ಯರಾಗಿದ್ದ ಶ್ರೀಮತಿ ಶಶಿಕಲಾ ಕೆಂಪರಣ್ಣನವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂಡಿಸಿಗೆರೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಉಪ ತಹಶೀಲ್ದಾರ್ ಮುತ್ತುರಾಜ್ ಅವರು ಚುನಾವಣೆಯ ಪ್ರಕ್ರಿಯೆಯನ್ನು ನಡೆಸಿದರು. ಈ ಹಿಂದೆ ಬಿಟ್ಟುಕೊಂಡನಹಳ್ಳಿ ವಾರ್ಡಿನ ಪ್ರೇಮ ಅವರು ಅಧ್ಯಕ್ಷರಾಗಿದ್ದು ಇದೀಗ ರಾಜೀನಾಮೆಯನ್ನು ಸಲ್ಲಿಕೆ ಮಾಡಿದ್ದರು. ಇದರಿಂದ ತೆರವಾಗಿದ್ದ ಸಾಮಾನ್ಯ ಮಹಿಳಾ ಮೀಸಲು ಸ್ಥಾನಕ್ಕೆ ಶ್ರೀಮತಿ ಶಶಿಕಲಾ ಕೆಂಪಣ್ಣನವರು ಏಕೈಕ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದು, ಇದೀಗ ಅವರನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಗಿದೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಶಶಿಕಲಾ ಕೆಂಪಣ್ಣನವರು, ಒಂದು ಗ್ರಾಮ ಪಂಚಾಯಿತಿ ಅಭಿವೃದ್ಧಿಯಾಗಬೇಕು ಎಂದರೆ ಯಾರೋ ಒಬ್ಬರಿಂದ ಸಾಧ್ಯವಾಗುವುದಿಲ್ಲ. ಎಲ್ಲಾ ಸದಸ್ಯರ ಸಹಕಾರ ಬಹಳ ಮುಖ್ಯ. ಹೀಗಾಗಿ ಅವರ ಸಹಕಾರವನ್ನು ಪಡೆದು ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು, ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಿಸುವುದು ಮತ್ತು ಜಾರಿ ಮಾಡುವುದು ಸೇರಿದಂತೆ ಅಗತ್ಯ ಸೌಕರ್ಯಗಳಾದ ನೀರು, ರಸ್ತೆ, ಬೀದಿ ದೀಪ ವಸತಿ ಹೀಗೆ ಸವಲತ್ತುಗಳಿಗೆ ಹೆಚ್ಚಿನ ಒತ್ತು ನೀಡುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಹಿಂಡಿಸಿಗೆರೆ ಗ್ರಾಮ ಪಂಚಾಯತಿ ಸದಸ್ಯರುಗಳು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಶಿಕಲಾ ಕೆಂಪಣ್ಣನವರಿಗೆ ಹಾರ ಹಾಕಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮವನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ರೇಷ್ಮಾ, ಸದಸ್ಯರಾದ ಗುರುಪ್ರಕಾಶ್, ಕೃಷ್ಣೆಗೌಡ, ಮಮತಾ, ಸುಧಾಮಣಿ, ಭಾರತಿ, ನಾಗರಾಜ್, ಗಂಗಾಧರ್ ಗೌಡ, ಕವಿತಾ ಶ್ವೇತಾ, ವೆಂಕಟೇಶ್, ಲೋಕೇಶ್, ಮತ್ತು ಪಿಡಿಒ ಮಂಜುಳಾ ಬೆಳ್ಳಳ್ಳಿ ಮತ್ತಿತರರು ಉಪಸಿತರಿದ್ದರು.