ತುಮಕೂರು | ಸಮಾಜ ಕಲ್ಯಾಣ ಇಲಾಖೆಯು ಜಿಲ್ಲಾ ವ್ಯಾಪ್ತಿಯಲ್ಲಿರುವ ಪ್ರತಿಷ್ಟಿತ ಶಾಲೆಗಳ 6 ನೇ ತರಗತಿ ಪ್ರವೇಶಕ್ಕಾಗಿ ಪ್ರತಿಭಾವಂತ ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರವೇಶ ಪರೀಕ್ಷೆ ಮೂಲಕ ವಿದ್ಯಾರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, 5 ನೇ ತರಗತಿಯಲ್ಲಿ ಶೇಕಡ 60 ಅಂಕ ಪಡೆದಿರಬೇಕು. ಕುಟುಂಬದ ಆದಾಯ 2.50 ಲಕ್ಷ ರೂ.ಗಳ ಮಿತಿಯೊಳಗಿರಬೇಕು.
ಪೌರ ಕಾರ್ಮಿಕರ/ ಸಫಾಯಿ ಕರ್ಮಚಾರಿ/ ಸ್ಮಶಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರ/ ದೇವದಾಸಿಯರ/ ಅಂಗವಿಕಲತೆ ಹೊಂದಿರುವವರು/ ಕೋವಿಡ್-19 ಮುಂತಾದ ಪ್ರಕೃತಿ ವಿಕೋಪದಿಂದ ತಂದೆ-ತಾಯಿಯನ್ನು ಕಳೆದುಕೊಂಡ/ ಸಿಂಗಲ್ ಫ್ಯಾಮಿಲಿ/ ಯೋಜನಾ ನಿರಾಶ್ರಿತರ/ ಮಾಜಿ ಸೈನಿಕರ/ ಕೊಳಗೇರಿಗಳಲ್ಲಿ ವಾಸಿಸುತ್ತಿರುವವರ/ ಕೃಷಿ ಕಾರ್ಮಿಕರ/ ಸಾಲ ಬಾಧೆಯಿಂದ ಆತ್ಮಹತ್ಯೆಗೆ ಗುರಿಯಾದವರ/ ದೌರ್ಜನ್ಯದಲ್ಲಿ ನೊಂದವರ ಮಕ್ಕಳು/ ಜೀತ ವಿಮುಕ್ತ ಮಕ್ಕಳಿಗೆ ಮೊದಲನೇ ಆದ್ಯತೆ ನೀಡಲಾಗುವುದು.
ಪ್ರತಿಷ್ಟಿತ ಶಾಲೆಗಳಲ್ಲಿ ಪ್ರವೇಶ ಪಡೆದ ಮಕ್ಕಳಿಗೆ ವಸತಿ, ಭೋಜನಾ ವೆಚ್ಚ, ಶಾಲೆಯ ಕಡ್ಡಾಯ ಶುಲ್ಕ, ಸಮವಸ್ತ್ರ, ಪಠ್ಯಪುಸ್ತಕ, ಪ್ರವಾಸ ಭತ್ಯೆ ಹಾಗೂ ಇತರೆ ಭತ್ಯೆಗಳನ್ನು ಇತರೆ ವಿದ್ಯಾರ್ಥಿಗಳಿಗೆ ನಿಗಧಿಪಡಿಸಿರುವಂತೆ ಉಚಿತವಾಗಿ ಆನ್‌ಲೈನ್ ಮೂಲಕ ಸಂಬಂಧಿಸಿದ ಮುಖ್ಯೋಪಾಧ್ಯಾಯರ ಶಾಲಾ ಖಾತೆಗೆ ಜಮೆಗೊಳಿಸಲಾಗುವುದು. ಒಟ್ಟು ವಾರ್ಷಿಕ ವೆಚ್ಚ 50,000 ರೂ. ಮೀರಬಾರದು. ಜಿಲ್ಲಾ ಮಟ್ಟದ ಶಾಲೆಗಳಿಗೆ ಸಂಬಂಧಿಸಿದಂತೆ 75,000/- ರೂ. ಮೀರಬಾರದು. ವಸತಿರಹಿತ ಶಾಲೆಗಳಿಗೆ ಭೋಜನಾ ವೆಚ್ಚ & ವಸತಿ ವೆಚ್ಚ ಪಾವತಿಸಲು ಅವಕಾಶವಿಲ್ಲ.
ಭರ್ತಿ ಮಾಡಿದ ಅರ್ಜಿಯನ್ನು ಜಂಟಿ ನಿರ್ದೇಶಕರು, ಸಮಾಜಕಲ್ಯಾಣ ಇಲಾಖೆ, ತುಮಕೂರು ಅಥವಾ ಆಯಾ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಗೆ ಮೇ ೩೦ರೊಳಗಾಗಿ ಸಲ್ಲಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ತಿಳಿಸಿದ್ದಾರೆ.