ತುಮಕೂರು | ಇತ್ತೀಚಿಗೆ ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ನನ್ನ ಕಣ್ಣಲ್ಲಿ ನೀರು ತರಿಸಿದವರ ಕಣ್ಣಲ್ಲಿ ನೀರು ಹಾಕಿಸಬೇಕು ಎಂದು ಪರೋಕ್ಷವಾಗಿ ಡಾ. ಜಿ ಪರಮೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿ ಲೋಕಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಅವರು ಕಾರಣ ಎಂದು ಆರೂಪಿಸಿದ್ದರು. ಇದೀಗ ಅವರಿಗೆ ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ತುಮಕೂರಿನಲ್ಲಿ ಅವರ ಸೋಲಿಗೆ ನಾನು ಕಾರಣ ಅಲ್ಲ, ನನ್ನ ಕ್ಷೇತ್ರ ಅವರಿಗೆ ಮುನ್ನಡೆ ನೀಡಿದೆ ಇಂತಹ ಆರೋಪಗಳಲ್ಲಿ ಸತ್ಯಾಶಂವಿಲ್ಲ ನಾವೆಲ್ಲರೂ ಕೂಡ ದೇವೇಗೌಡರಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಚನ್ನರಾಯನದುರ್ಗ ಹೋಬಳಿಯ ಮನೆ ಮನೆಗೆ ತೆರಳಿ ಮತಯಾಚನೆ ಮಾಡುವ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಮಿಶ್ರ ಸರ್ಕಾರದಲ್ಲಿ ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಲು ದೆಹಲಿ ವರಿಷ್ಠರು ತೀರ್ಮಾನಿಸಿದರು. ಪಕ್ಷದ ಅಭ್ಯರ್ಥಿಯನ್ನಾಗಿ ದೇವೇಗೌಡರನ್ನು ಮಾಡಿದ್ದು ಜೆಡಿಎಸ್ ಪಕ್ಷದವರೇ, ನಮ್ಮ ವರಿಷ್ಠರ ಆದೇಶದಂತೆ ನಾವು ಅಂದು ದೇವೇಗೌಡರಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ.
ಅವರಿಗೆ ಕಣ್ಣೀರು ಹಾಕಿಸಿದ್ದು ನಾನಲ್ಲ, ಯಾರು ಹಾಕಿಸಿದ್ದು ಅಂತ ದೇವೇಗೌಡ್ರು ಸ್ಪಷ್ಟವಾಗಿ ಹೇಳಬೇಕು. ಅಂದು ತುಮಕೂರಿನಲ್ಲಿ ಜೆಡಿಎಸ್ ಪಕ್ಷದ ಶಾಸಕರುಗಳಿಂದ ಕೆಲವು ಕ್ಷೇತ್ರಗಳಲ್ಲಿ ದೇವೇಗೌಡರಿಗೆ ಮುನ್ನಡೆ ಬಂದಿರುವುದಿಲ್ಲ, ಈ ಬಗ್ಗೆ ಸಿಎಂ ಇಬ್ರಾಹಿಂ ಅವರು ಮೊದಲು ಆಲೋಚನೆ ಮಾಡಿಕೊಳ್ಳಲಿ, ಕಾಂಗ್ರೆಸ್ ನವರ ಮೇಲೆ ಸುಖ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ, ನಾವುಗಳು ದೇವೇಗೌಡರನ್ನು ಗೌರವದಿಂದ ನಡೆಸಿಕೊಂಡಿದ್ದೇವೆ. ಪ್ರಾಮಾಣಿಕ ಚುನಾವಣೆ ಮಾಡಿದ್ದೇವೆ. ನನ್ನ ಕ್ಷೇತ್ರದಲ್ಲಿ ಲೀಡ್ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.