ಬೆಳಗಾವಿ | ಗ್ಯಾರಂಟಿ ಯೋಜನೆಗಳಿಂದ (Guarantee plan) ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತವಾಗಿಲ್ಲ, ರಾಜ್ಯದಲ್ಲಿ 2023-24 ರಲ್ಲಿ ಅಭಿವೃದ್ಧಿ ವೆಚ್ಚಗಳಿಗಾಗಿ 2,14,292 ಕೋಟಿ ರೂ ವೆಚ್ಚ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಗೊಳಿಸಲು ಸದರಿ ಯೋಜನೆಗಳಿಗೆ ಆಯವ್ಯಯ ದಲ್ಲಿ 52,009 ಕೋಟಿ ರೂ ಗಳನ್ನು ಒದಗಿಸಿದೆ. ರಾಜ್ಯ ಸರ್ಕಾರವು 2023-24 ರಲ್ಲಿ 90,280 ಕೋಟಿ ರೂ ಗಳನ್ನು ಸಾಲ ಪಡೆದಿದ್ದು, ರಾಜ್ಯದ ವಿತ್ತೀಯ ಕೊರತೆ 2.6% ಇದ್ದು, ರಾಜ್ಯ ಸರ್ಕಾರವು ಪಡೆದ ಒಟ್ಟು ಸಾಲ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಮಾನದಂಡ ಮತ್ತು ಕೇಂದ್ರ ಸರ್ಕಾರ ನಿಗಧಿಪಡಿಸಿರುವ ಸಾಲಮಿತಿಗೆ ಒಳಪಟ್ಟಿದೆ ಎಂದರು.
ರಾಜ್ಯ ಸರ್ಕಾರವು ರಾಜಸ್ವ ಹಾಗು ಬಂಡವಾಳ ಸ್ವೀಕೃತಿಗಳಿಂದ ಮತ್ತು ಕೇಂದ್ರ ಸರ್ಕಾರ ನಿಗದಿಪಡಿಸುವ ಮಿತಿಯೊಳಗೆ ಸಾಲವನ್ನು ಪಡೆಯುವ ಮೂಲಕ ಆಯವ್ಯಯದಲ್ಲಿ ಅಂದಾಜಿಸಿರುವ ವೆಚ್ಚವನ್ನು ಭರಿಸುತ್ತದೆ. ಈ ಸ್ವೀಕೃತಿಗಳನ್ನು ಮೀರಿ ಈವರೆಗೂ ಯಾವುದೇ ವೆಚ್ಚದ ಹೊರೆ ರಾಜ್ಯ ಸರ್ಕಾರಕ್ಕೆ ಉಂಟಾಗಿರುವುದಿಲ್ಲ ಎಂದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಅಭಿವೃದ್ಧಿ ಕುಂಠಿತವಾಗಿದೆ ಎಂಬ ವಿರೋಧ ಪಕ್ಷಗಳ ಆರೋಪ ಸುಳ್ಳು ಹಾಗೂ ಸತ್ಯಕ್ಕೆ ದೂರವಾಗಿದ್ದು ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.