ಹುಬ್ಬಳ್ಳಿ | ಹುಬ್ಬಳ್ಳಿಯ ಉಣಕಲ್ ಸಮೀಪದ ಅಚ್ಚವ್ವನ ಕಾಲೋನಿಯಲ್ಲಿ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ (Gas cylinder explosion) ಗಾಯಗೊಂಡ ಅಯ್ಯಪ್ಪ ಮಾಲಾಧಾರಿಗಳ ನೋವಿಗೆ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಸ್ಪಂದಿಸಿದ್ದಾರೆ.
ಅಯ್ಯಪ್ಪ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡ ವಿಷಯ ನನಗೆ ದಿಗ್ಭ್ರಮೆ ಮೂಡಿಸಿದೆ. ಎಲ್ಲಾ ಗಾಯಾಳುಗಳಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅವರಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿ ಹಾಗೂ ಕಿಮ್ಸ್ ನ ಮುಖ್ಯಸ್ಥರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ತಮ್ಮ ಎಂದಿನ ವ್ರತವನ್ನು ಮುಗಿಸಿ, ಪೂಜೆ ಸಲ್ಲಿಸಿ ನಿದ್ರೆಗೆ ಜಾರಿದ್ದರು. ಈ ವೇಳೆ ಓರ್ವ ಅಯ್ಯಪ್ಪ ಮಾಲಾಧಾರಿಯ ಕಾಲು ಗ್ಯಾಸ್ ಸಿಲಿಂಡರ್ಗೆ ತಾಗಿದ ಪರಿಣಾಮ ಗ್ಯಾಸ್ ಸೋರಿಕೆಯಾಗಿತ್ತು. ದೇವಸ್ಥಾನದಲ್ಲಿ ದೀಪ ಉರಿಯುತ್ತಿದ್ದರಿಂದ ಏಕಾಏಕಿ ಬೆಂಕಿ ಹೊತ್ತಿಕೊಂಡಿತ್ತು. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.
ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ 10 ಸಾವಿರ ಧನ ಸಹಾಯ
ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡ ಅಯ್ಯಪ್ಪ ಮಾಲಾಧಾರಿಗಳಿಗೆ ಸಚಿವ ಸಂತೋಷ್ ಲಾಡ್ ಅವರು ಧನಸಹಾಯ ಮಾಡಿದ್ದಾರೆ. ಎಲ್ಲ 9 ಜನರ ಕುಟುಂಬಗಳಿಗೆ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ 10 ಸಾವಿರ ಧನ ಸಹಾಯ ಮಾಡಲಾಗಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಪಾಟೀಲ್ ಹಾಗೂ ಅಲ್ತಾಫ್ ಹಳ್ಳೂರ್ ಅವರು ಗಾಯಾಳುಗಳ ಸಂಬಂಧಿಕರಿಗೆ ಫೌಂಡೇಶನ್ ನಿಂದ ನೀಡಲಾದ ಧನಸಹಾಯದ ಚೆಕ್ ಗಳನ್ನು ವಿತರಿಸಿದ್ದಾರೆ.