ತುಮಕೂರು : ಜಿಲ್ಲೆಯ ತುರುವೇಕೆರೆ ತಾಲೂಕಿನ ಕುಣಿಕೇನಹಳ್ಳಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ವಿಚಿತ್ರವಾದ ಫಂಗಸ್ ಸಮಸ್ಯೆ ಕಂಡು ಬಂದಿದ್ದು, ಇದೀಗ ತುಮಕೂರು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಮಂಜುನಾಥ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಹೌದು,, ಕುಣಿಕೇನಹಳ್ಳಿಯ 21 ಯಲಚಗೆರೆ ಗ್ರಾಮದ 5 ಶಾಲಾ ವಿದ್ಯಾರ್ಥಿಗಳಿಗೆ ಅಂಗೈ ಮತ್ತು ಅಂಗಾಲುಗಳಲ್ಲಿ ಕಪ್ಪು ಕಲೆಗಳ ಫಂಗಸ್ ಕಂಡುಬಂದಿದ್ದು, ಈ ಭಾಗದಲ್ಲಿ ಇದು ಹೊಸದಾಗಿದ್ದು ಎಲ್ಲರಲ್ಲೂ ಆತಂಕ ಉಂಟು ಮಾಡಿತ್ತು.
ಈ ಬಗ್ಗೆ ಮಾಹಿತಿ ನೀಡಿರುವ ತುಮಕೂರು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಮಂಜುನಾಥ್, ಇದು ‘ಸಿಂಗಿ ಡೇ ಪಿಗ್ಮಂಟೇಷನ್’ ಎಂಬ ಸಾಮಾನ್ಯ ತಿಗಣೆ ಆಕಾರದ ಕೀಟಗಳಿಂದ ಬರುವಂತಹ ಸಮಸ್ಯೆ ಆಗಿದೆ. ಬರಿಗಾಲಿನಲ್ಲಿ ಓಡಾಡುವ ಜನರಿಗೆ ಅಥವಾ ಕೈಯಿಂದ ಮುಟ್ಟಿದಂತಹ ಜನರಿಗೆ ಇಂತಹ ಸಮಸ್ಯೆಗಳು ಕಂಡುಬರುತ್ತವೆ.
ಮಳೆಗಾಲದಲ್ಲಿ ಇದು ಸರ್ವೇಸಾಮಾನ್ಯವಾಗಿದ್ದು, ಕಾಲು ಅಥವಾ ಕೈಗೆ ತಾಕಿದಾಗ ಇಂತಹ ಕಲೆಗಳು ಉದ್ಬವವಾಗುತ್ತವೆ. ತುರಿಕೆ ಆಗುವಂತಹ ಅನುಭವ ಆಗುತ್ತದೆ ಹೀಗಾಗಿ ಸಾರ್ವಜನಿಕರು ಇದರ ಬಗ್ಗೆ ಎಚ್ಚರದಿಂದ ಇರಬೇಕು.
ಈ ಸಮಸ್ಯೆಗೆ ಹೆದರುವ ಅಗತ್ಯ ಇಲ್ಲ, ಈ ಹಿಂದೆಯೂ ಕೂಡ ತುಮಕೂರು ಜಿಲ್ಲೆ ಶಿರಾ ತಾಲೂಕಿನಲ್ಲಿ ಇಂತಹ ಸಮಸ್ಯೆ ಕಂಡುಬಂದಿತ್ತು. ಔಷಧೀಯ ಮೂಲಕ ಅವುಗಳನ್ನು ಗುಣಪಡಿಸಬಹುದು. ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ ಎಂದು ಈ ಮೂಲಕವಾಗಿ ಸಾರ್ವಜನಿಕರ ಆತಂಕವನ್ನು ದೂರ ಮಾಡಿದ್ದಾರೆ.