ತುಮಕೂರು | ಮಹಾತ್ಮಗಾಂಧಿ ನರೇಗಾ ಯೋಜನೆಯ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರಿಗೆ ಆರೋಗ್ಯ ಸೇವೆ ಒದಗಿಸುವ ದೃಷ್ಠಿಯಿಂದ ಕರ್ನಾಟಕ ಆರೋಗ್ಯ ಸಂವರ್ಧನಾ ಸಂಸ್ಥೆ(ಕೆಎಚ್‌ಪಿಟಿ), ಜಿಲ್ಲಾ ಪಂಚಾಯತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಮೇ 22 ರಿಂದ ಜೂನ್ 22 ರವರೆಗೆ ಒಂದು ತಿಂಗಳ ಕಾಲ ತುಮಕೂರು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾತಿಗಳ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿ ಸ್ಥಳಗಳಲ್ಲಿ ಗ್ರಾಮ ಆರೋಗ್ಯ ಆಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಡಿ.ಜೈಪಾಲ್ ತಿಳಿಸಿದ್ದಾರೆ.
ಈ ಅಭಿಯಾನದಡಿ ಮಹಾತ್ಮಗಾಂಧಿ ನರೇಗಾ ಯೋಜನೆಯ ಉದ್ಯೋಗ ಚೀಟಿ ಹೊಂದಿರುವ ಪ್ರತಿ ಕೂಲಿ ಕಾರ್ಮಿಕರು ಉಚಿತವಾಗಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಈಗಾಗಲೇ ಈ ಅಭಿಯಾನದ ಮೂಲಕ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಮಟ್ಟದಲ್ಲಿ ಮಹಾತ್ಮಗಾಂಧಿ ನರೇಗಾ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಅಭಿಯಾನದಿಂದ ಹೊರಗುಳಿದ ನರೇಗಾ ಕಾಮಗಾರಿ ನಿರ್ವಹಿಸುತ್ತಿರುವ ಕೂಲಿಕಾರ್ಮಿಕರಿಗಾಗಿ ಆರೋಗ್ಯ ಸೇವೆಯನ್ನು ಒದಗಿಸಲಾಗುತ್ತಿದೆ.
ಈಗಾಗಲೇ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾತಿಗಳಿಗೆ ಅಮೃತ ಆರೋಗ್ಯ ಅಭಿಯಾನದಡಿ ಹೆಲ್ತ್ ಸ್ಕಿನ್ ಕಿಟ್ ವಿತರಿಸಲಾಗಿದ್ದು, ಈ ಕಿಟ್ ಉಪಯೋಗಿಸಿಕೊಂಡು ಸ್ಥಳೀಯ ಆರೋಗ್ಯ ಕೇಂದ್ರದ ಅಧಿಕಾರಿ ಹಾಗೂ ಕರ್ನಾಟಕ ಆರೋಗ್ಯ ಸಂವರ್ಧನಾ ಸಂಸ್ಥೆ(ಕೆಎಚ್‌ಪಿಟಿ) ಸಿಬ್ಬಂದಿ ಸಹಾಯದಿಂದ ಗ್ರಾಮೀಣ ಹಾಗೂ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆಯನ್ನು ಕೈಗೊಳ್ಳಲಾಗುವುದು.
ಗ್ರಾಮ ಆರೋಗ್ಯ ಅಭಿಯಾನವನ್ನು ಯಶಸ್ವಿಗೊಳಿಸಲು ಈಗಾಗಲೇ ಎಲ್ಲಾ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಗ್ರಾಮದಲ್ಲಿ ನಡೆಯುವ ಆರೋಗ್ಯ ಅಭಿಯಾನದ ದಿನಾಂಕ, ಸ್ಥಳ, ಸಮಯ ನಿಗಧಿಪಡಿಸಿ ಡಂಗುರ ಸಾರುವುದು, ಕಸ ವಿಲೇವಾರಿ ಘಟಕದ ವಾಹನದಲ್ಲಿ ಜಿಂಗಲ್ಸ್ ಮೂಲಕ ಪ್ರಚಾರ ಸೇರಿದಂತೆ ವಿವಿಧ ಪ್ರಚಾರ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಬೇಕು. ಉದ್ಯೋಗ ಚೀಟಿ ಹೊಂದಿರುವ ಪ್ರತಿಯೊಬ್ಬರೂ ಆರೋಗ್ಯ ತಪಾಸಣೆಗೆ ಒಳಪಡಲು ಜಾಗೃತಿ ಮೂಡಿಸುವತ್ತ ಕ್ರಮ ಕೈಗೂಳ್ಳಬೇಕೆಂದು ಎಲ್ಲಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.