ಬೆಂಗಳೂರು | ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಎಸ್. ಆರ್. ಬೊಮ್ಮಾಯಿ ಜನ್ಮ ಶತಮಾನತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ತಂದೆಯ ಸರಳತೆ ಮತ್ತು ಜೀವನ ನಡೆಸಿದ ಬಗೆಯನ್ನು ನೆನೆದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾದರು.
ತಂದೆಯವರು ಶಾಲೆಗೆ ಕೈ ಹಿಡಿದು ಕರೆದುಕೊಂಡು ಹೋಗುತ್ತಿದ್ದ ಸಂದರ್ಭ, ಊಟ ಮಾಡುವಾಗ ಮಕ್ಕಳಿಗೆ ಸಮಾನತೆಯ ಪಾಠ ಮಾಡುತ್ತಿದ್ದದ್ದನ್ನು ನೆನೆದು ಕಣ್ಣೀರು ಹಾಕಿದರು.
ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ , ಪದ್ಮ ವಿಭೂಷಣ, ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರು ಮತ್ತು ಎಸ್. ಆರ್. ಬೊಮ್ಮಾಯಿ ಗಾಡ್ ಫಾಧರ್ ಇಲ್ಲದೆ ರಾಜಕೀಯದಲ್ಲಿ ಬೆಳೆದವರು, ಅವರು ಹೊರಾಟದ ಮೂಲಕ ಜನರ ಮನದಲ್ಲಿ ಉಳಿದವರು ಎಂದು ಬೊಮ್ಮಾಯಿ ಹೇಳಿದರು.
ಎಸ್. ಆರ್ ಬೊಮ್ಮಾಯಿಯವರ ಕಾಲದಲ್ಲಿ ತೆಗೆದುಕೊಂಡ ಕೆಲವು ತೀರ್ಮಾನಗಳು ಈಗಿನ ಕಾಲಘಟ್ಟದಲ್ಲಿ ಪ್ರಸ್ತುತ ಇರದಿರಬಹುದು ಆದರೆ ಆಗಿನ ಸಂದರ್ಭದಲ್ಲಿ ಅವುಗಳ ಪ್ರಾಮುಖ್ಯತೆ ಬೇರೆಯೇ ಇತ್ತು ಎಂದು ತಂದೆಯ ಆಡಳಿತದ ಶೈಲಿಯನ್ನು ಬೊಮ್ಮಾಯಿ ನೆನೆದರು.
ಅವರು ದೊಡ್ಡ ವಕೀಲರಾಗಿದ್ದರೂ ಎಲ್ಲೂ ದೊಡ್ಡಸ್ತಿಕೆ ತೋರಲಿಲ್ಲ. ಜನ ಸೇವೆಯಲ್ಲೇ ಸಾರ್ಥಕತೆಯನ್ನು ಕಂಡರೂ. ರಾಜಕೀಯದಲ್ಲಿ ತಾವು ನಂಬಿದ ಸಿದ್ಧಾಂತಗಳಲ್ಲಿ ರಾಜಿಯಾಗಿದ್ದರೆ ಇನ್ನೂ ಅಧಿಕಾರ ಅನುಭವಿಸಬಹುದಿತ್ತು. ಅವರಿಗೆ ಮತ್ತೊಮ್ಮೆ ಸಿಎಂ ಆಗುವ ಅವಕಾಶ ಬಂದಾಗ, ನಾನೂ ಈಗಾಗಲೇ ಕುರ್ಚಿ ಹತ್ತಿ ಇಳಿದ್ದೇನೆ ಮತ್ತೆ ಆ ಹುದ್ದೆ ಬೇಡ ಅಂತ ತಿರಸ್ಕರಿಸಿದ್ದರು.
ನನ್ನ ರಾಜಕೀಯ ಜೀವನದಲ್ಲಿ ಯಡಿಯೂರಪ್ಪ ಅವರನ್ನು ತಂದೆ ಸ್ಥಾನದಲ್ಲಿ, ಗುರುವಿನ ಸ್ಥಾನದಲ್ಲಿ ನೋಡುತ್ತೇನೆ. ರಾಜಕೀಯವಾಗಿ ನನ್ನನ್ನು ಕೈ ಹಿಡಿದುಕೊಂಡು ಬಂದು ಅವಕಾಶ ನೀಡಿ ರಾಜಕೀಯದಲ್ಲಿ ಗಟ್ಟಿಯಾಗಿ ನಿಲ್ಲುವಂತೆ ಮಾಡಿದರು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಎಸ್. ಆರ್ ಬೊಮ್ಮಾಯಿಯವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಇಡೀ ವರ್ಷ ಆಚರಿಸಲು ತೀರ್ಮಾನ ಮಾಡಿದ್ದೇವೆ. ನಮ್ಮ ತಂದೆಯವರ ಹುಟ್ಟೂರು, ಹುಬ್ಬಳ್ಳಿ, ಬೆಂಗಳೂರು, ದೆಹಲಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನ ಮಾಡಿದ್ದೇವೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.