ಮನರಂಜನೆ | ಭಾರತದ ಬೃಹತ್ ಆಕ್ಷನ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಖ್ಯಾತ ನಟ ಮೋಹನ್ ಲಾಲ್ ಅಭಿನಯದ ‘ವೃಷಭ’ ಎಂಬ ಪ್ಯಾನ್ ಇಂಡಿಯಾ ಚಿತ್ರದ ಚಿತ್ರೀಕರಣ ಕಳೆದ ಭಾನುವಾರದಿಂದ ಪ್ರಾರಂಭವಾಗಿದೆ.
‘ವೃಷಭ’ ಚಿತ್ರದಲ್ಲಿ ಮೈ ಜುಂ ಎನಿಸುವಂತಹ ಆಕ್ಷನ್ ಮತ್ತು ರೋಚಕ ದೃಶ್ಯಗಳು ಇರಲಿದ್ದು, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಜೊತೆಗೆ ರೋಶನ್ ಮೇಕಾ, ಶನಾಯ ಕಪೂರ್, ಝಾರಾ ಖಾನ್, ಶ್ರೀಕಾಂತ್ ಮೇಕಾ ಮುಂತಾದವರು ನಟಿಸುತ್ತಿದ್ದಾರೆ. ಕನ್ನಡದ ರಾಗಿಣಿ ದ್ವಿವೇದಿ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ‘ಕಾಂದಹಾರ್’ ನಂತರ ಇದೇ ಎರಡನೆಯ ಬಾರಿಗೆ ಮೋಹನ್ ಲಾಲ್ ಜೊತೆಗೆ ರಾಗಿಣಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ನಿರ್ದೇಶಕ ನಂದಕಿಶೋರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಚಿತ್ರ ಪ್ರಾರಂಭವಾದ ವಿಷಯವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡ ನಟ ಮೋಹನ್ ಲಾಲ್, ‘’ವೃಷಭ’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದದ ನಿರೀಕ್ಷೆಯಲ್ಲಿದ್ದೇವೆ’ ಎಂದು ಹೇಳಿದ್ದಾರೆ.
‘ವೃಷಭ’ ಚಿತ್ರವನ್ನು ಬಾಲಿವುಡ್ ನ ಜನಪ್ರಿಯ ನಿರ್ಮಾಣ ಸಂಸ್ಥೆಯಾದ ಬಾಲಾಜಿ ಟೆಲಿಫಿಲಂಸ್ ಮತ್ತು ಕನೆಕ್ಟ್ ಮೀಡಿಯಾ, ಎವಿಸ್ ಸ್ಟುಡಿಯೋದ ಸಹಯೋಗದೊಂದಿಗೆ ನಿರ್ಮಿಸುತ್ತಿದೆ. ಏಕ್ತಾ ಕಪೂರ್, ಶೋಭಾ ಕಪೂರ್, ಅಭಿಷೇಕ್ ವ್ಯಾಸ್, ವಿಶಾಲ್ ಗುರ್ನಾನಿ, ಜೂಹಿ ಪಾರೇಖ್ ಮೆಹ್ತಾ, ಶ್ಯಾಮಸುಂದರ್, ವರುಣ್ ಮಾಥುರ್ ಮತ್ತು ಸೌರಭ್ ಮಿಶ್ರಾ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಬಹು ನಿರೀಕ್ಷಿತ ಈ ಚಿತ್ರವು ಮುಂದಿನ ವರ್ಷ ಜಗತ್ತಿನಾದ್ಯಂತ 4500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.