ಚಿಕ್ಕಬಳ್ಳಾಪುರ | ಚಿಂತಾಮಣಿ ತಾಲ್ಲೂಕಿನ ತಳಗವಾರ ವಿದ್ಯುತ್ ಉಪ ಕೇಂದ್ರದ ವ್ಯಾಪ್ತಿಗೆ ಬರುವ ಸುಮಾರು 50 ಹಳ್ಳಿಗಳಿಗೆ ಸಮಯಕ್ಕೆ ಸರಿಯಾಗಿ ವಿದ್ಯುತ್ ಸರಬರಾಜು ಮಾಡದೆ ಇರುವ ಕಾರಣ ರೈತರು ಉಪಕೇಂದ್ರಕ್ಕೆ ಬೀಗ ಜಡೆದು ಬಿರಿಯಾನಿ ಮಾಡಿ ವಿನೂತನ ಪ್ರತಿಭಟನೆ ನಡೆಸಿದ್ದಲ್ಲದೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ನಂತರ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ರೈತರು ಪ್ರತಿಭಟನೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಘಟನೆ ನಡೆಯಿತು.
ಪ್ರತಿಭಟನೆ ನಡೆಸಿ ಮಾತನಾಡಿದ ರೈತರು ಮಳೆ ಇಲ್ಲದೆ ತೀವ್ರ ಬರಗಾಲ ಎದುರಾಗಿದ್ದು, ವಿವಿಧ ಬೆಳೆಗಳು ಒಣಗಿ ನಿಂತಿವೆ. ಕೃಷಿ ಪಂಪ್‌ಸೆಟ್‌ಗಳಿಂದ ರೈತರು ಬೆಳೆದ ಬೆಳೆಗಳಿಗೆ ನೀರನ್ನು ಹಾಯಿಸಿ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಮಧ್ಯೆ ಸರ್ಕಾರ ಏಕಾಏಕಿ ವಿದ್ಯುತ್ ಪೂರೈಕೆಯನ್ನು 7 ತಾಸಿನಿಂದ ಕೇವಲ ಮೂರು ತಾಸಿಗೆ ಇಳಿಸಿದ್ದು, ರೈತರಿಗೆ ಸಂಕಷ್ಟ ಎದುರಿಸುವಂತಾಗಿದೆ. ಬರದಿಂದ ತತ್ತರಿಸಿರುವ ರೈತರಿಗೆ ವಿದ್ಯುತ್ ಕಡಿತಗೊಳಿಸಿರವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬೆಸ್ಕಾಂ ಕೂಡಲೇ ವಿದ್ಯುತ್ ಕಡಿತ ಕ್ರಮವನ್ನು ಹಿಂತೆಗೆದುಕೊಂಡು ಹಿಂದಿನಂತೆ ಹಗಲು ನಾಲ್ಕು ತಾಸು ಮತ್ತು ರಾತ್ರಿ 3 ತಾಸು ಒಟ್ಟು 7 ತಾಸು ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇನ್ನು ಬೆಸ್ಕಾಂ ಇಲಾಖೆಯ ಇಇ ಶುಭ, ಎ ಇ ಇ ಶಿವಶಂಕರ್, ಶ್ರೀನಿವಾಸ್ ಕುಮಾರ್, ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರನ್ನು ಮನ ಒಲಿಸಲು ಎಷ್ಟೇ ಪ್ರಯತ್ನಿಸಿದರು ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆಯದೆ ಮುಂದುವರಿಸಿದರು, ಪ್ರತಿಭಟನೆಯಲ್ಲಿ ಕೈವಾರ ಹೋಬಳಿ ಮಟ್ಟದ ಎಲ್ಲಾ ರೈತರು ಭಾಗವಹಿಸಿದ್ದರು.