ಬೆಂಗಳೂರು | ಮೊದಲೇ ಯಡಿಯೂರಪ್ಪನವರ (Yeddyurappa) ಕುಟುಂಬದ ವಿರುದ್ದ ಕೊತಕೊತ ಕುದಿಯುತ್ತಿದ್ದ ಹಿರಿಯ ಬಿಜೆಪಿ (BJP) ನಾಯಕ ಈಶ್ವರಪ್ಪ (Eshwarappa) ಈಗ ಮತ್ತಷ್ಟು ಗರಂ ಆಗಿದ್ದಾರೆ. ಬೆಂಗಳೂರು ಪ್ರವಾಸದ ವೇಳೆ, ದೆಹಲಿಗೆ (Delhi) ಬರುವಂತೆ ಸೂಚಿಸಿದ್ದ ಅಮಿತ್ ಶಾ (Amit Shah), ಅವರನ್ನು ಭೇಟಿ ಮಾಡದೇ ವಾಪಸ್ ಕಳುಹಿಸಿದ್ದಾರೆ.
ಅಮಿತ್ ಶಾ ಸೂಚನೆಯ ಮೇರೆ ಈಶ್ವರಪ್ಪ ಬುಧವಾರ ಬೆಳಗ್ಗೆ ದೆಹಲಿಗೆ ಪ್ರಯಾಣಿಸಿದ್ದರು. ಆದರೆ, ಇಡೀ ದಿನ ಕಾದರೂ ಅಮಿತ್ ಶಾ ದರ್ಶನ ಭಾಗ್ಯ ಸಿಗದೇ ಕರ್ನಾಟಕಕ್ಕೆ ಈಶ್ವರಪ್ಪ ವಾಪಸ್ ಬಂದಿದ್ದಾರೆ. ಆ ಮೂಲಕ, ಈಶ್ವರಪ್ಪ ಮತ್ತೊಂದು ಹಿನ್ನಡೆಯನ್ನು ಎದುರಿಸುವಂತಾಗಿದೆ.
ಕೆಲವೊಂದು ಮೂಲಗಳ ಪ್ರಕಾರ, ಈಶ್ವರಪ್ಪನವರ ಸ್ವಯಂಕೃತ ಅಪರಾಧದಿಂದಲೇ ಅಮಿತ್ ಶಾ ಅವರನ್ನು ಭೇಟಿಯಾಗಲು ಒಪ್ಪಿಲ್ಲ ಎಂದು ಹೇಳಲಾಗುತ್ತಿದೆ. ಗೌಪ್ಯವಾಗಿ ಇರಬೇಕಾದ ವಿಚಾರವನ್ನು ಸಾರ್ವಜನಿಕವಾಗಿ ಈಶ್ವರಪ್ಪ ಹೇಳಿದ್ದರು.
ಬೆಂಗಳೂರಿನಲ್ಲಿ ಅಮಿತ್ ಶಾ ಇರುವ ವೇಳೆ ತಮ್ಮ ಜೊತೆಗೆ ಮಾತನಾಡಿದ್ದನ್ನು ಈಶ್ವರಪ್ಪ ಮಾಧ್ಯಮದವರ ಮುಂದೆ ಹೇಳಿದ್ದರು. ಯಡಿಯೂರಪ್ಪನವರ ಕುಟುಂಬದ ಜೊತೆಗಿನ ಭಿನ್ನಾಭಿಪ್ರಾಯವನ್ನು ಶಾ ಅವರಿಗೆ ವಿವರಿಸಿದ್ದೆ, ಕಾಂತೇಶನ ಭವಿಷ್ಯದ ಬಗ್ಗೆ ಅಮಿತ್ ಶಾ ಕೇಳಿದರು. ಈ ರೀತಿಯ ಮಾಹಿತಿಯನ್ನು ಬಹಿರಂಗ ಪಡಿಸಿದ್ದರು.
ಇದಾದ ನಂತರ, ದೆಹಲಿಗೆ ಬರುವ ವಿಚಾರವನ್ನು ಗೌಪ್ಯವಾಗಿ ಇಡದೇ ಅದನ್ನೂ ಮಾಧ್ಯಮದವರ ಮುಂದೆ ಬಹಿರಂಗ ಪಡಿಸಿದ್ದು ಅಮಿತ್ ಶಾ ಸಿಟ್ಟಿಗೆ ಕಾರಣ ಎಂದು ಹೇಳಲಾಗುತ್ತಿದೆ. ಹಿರಿಯರಾದವರಿಗೆ ಯಾವ ವಿಚಾರವನ್ನು ಮಾಧ್ಯಮದ ಮುಂದೆ ಹೇಳಬೇಕು, ಹೇಳಬಾರದು ಎನ್ನುವುದು ಗೊತ್ತಾಗುವುದಿಲ್ಲವೇ ಎಂದು ಈಶ್ವರಪ್ಪನವರನ್ನು ಭೇಟಿಯಾಗದೇ ವಾಪಸ್ ಕಳುಹಿಸಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ದೆಹಲಿಯಲ್ಲಿ ಅಮಿತ್ ಶಾ ಭೇಟಿಗೆ ಅವಕಾಶ ಸಿಗದ ನಂತರ ರಾಜ್ಯಕ್ಕೆ ವಾಪಸ್ ಬರುವ ವೇಳೆ ಮತ್ತೆ ಬಿಜೆಪಿ ವರಿಷ್ಠರ ಬಗ್ಗೆ ಈಶ್ವರಪ್ಪ ಮಾತನಾಡಿದ್ದಾರೆ. ಅವರೇ ದೆಹಲಿಗೆ ಕರೆಸಿ, ಈಗ ಭೇಟಿಗೆ ಅವಕಾಶವನ್ನು ನೀಡುತ್ತಿಲ್ಲ, ಇದರ ಅರ್ಥ ನನ್ನ ಸ್ಪರ್ಧೆಗೆ ಅವರ ಅನುಮತಿಯಿದೆ ಎಂದು ನಾನು ಭಾವಿಸುತ್ತೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಚುನಾವಣೆಗೆ ಈಶ್ವರಪ್ಪ ಸ್ಪರ್ಧಿಸಲಿ, ರಾಘವೇಂದ್ರ ಸೋಲಲಿ ಎನ್ನುವ ಅಭಿಪ್ರಾಯದಲ್ಲಿ ಅಮಿತ್ ಶಾ ಇದ್ದಾರೆ. ಈ ಕಾರಣಕ್ಕೆ ಅವರು ನನ್ನನ್ನು ಭೇಟಿಯಾಗಿಲ್ಲ, ನಾನು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಆಶಯದಂತೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ” ಎಂದು ಈಶ್ವರಪ್ಪ ದೆಹಲಿಯಲ್ಲಿ ಹೇಳಿ ಮತ್ತೊಂದು ಎಡವಟ್ಟನ್ನು ಮಾಡಿಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.