ತುಮಕೂರು | ಮತದಾರರ ಪಟ್ಟಿ (Electoral Roll) ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ ಮತದಾರರ ಅನುಕೂಲಕ್ಕಾಗಿ ನವೆಂಬರ್ 18 ಮತ್ತು 19 ರಂದು ಹಾಗೂ ಡಿಸೆಂಬರ್ 2 ಮತ್ತು 3 ರಂದು ವಿಶೇಷ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅರ್ಹ ಮತದಾರರು ಈ ವಿಶೇಷ ಆಂದೋಲನದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ. ಶ್ರೀನಿವಾಸ್ (K. Srinivas) ಮನವಿ ಮಾಡಿದ್ದಾರೆ.
Family politics | ವಿಜಯೇಂದ್ರರನ್ನು ಬಿಜೆಪಿ ರಾಜ್ಯ ಅಧ್ಯಕ್ಷರನ್ನಾಗಿ ಮಾಡಿದ್ದು ದುರಂತ – karnataka360.in
ಈ ವಿಶೇಷ ಆಂದೋಲನ ಕಾರ್ಯಕ್ರಮದಲ್ಲಿ ನಿಗಧಿತ ದಿನಾಂಕಗಳಂದು ಬಿಎಲ್ಓ(ಮತಗಟ್ಟೆ ಮಟ್ಟದ ಅಧಿಕಾರಿ)ಗಳು ಸಂಬಂಧಪಟ್ಟ ಮತಗಟ್ಟೆಗಳಲ್ಲಿ ಹಾಜರಿದ್ದು, ಸಾರ್ವಜನಿಕರಿಂದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ ಮತ್ತು ತೆಗೆದು ಹಾಕುವಿಕೆಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ.
ಸಾರ್ವಜನಿಕರ ಮಾಹಿತಿಗಾಗಿ ಈಗಾಗಲೇ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಡಿಸೆಂಬರ್ 9 ರವರೆಗೆ ಅವಕಾಶವಿದ್ದು, ಸಾರ್ವಜನಿಕರು ತಮ್ಮ ನಿವಾಸ ವ್ಯಾಪ್ತಿಯ ಮತಗಟ್ಟೆಗಳಲ್ಲಿನ ಮತದಾರರ ಪಟ್ಟಿಗಳಲ್ಲಿ ತಮ್ಮ ಹಾಗೂ ತಮ್ಮ ಮನೆ ಸದಸ್ಯರ ಹೆಸರುಗಳು ನಮೂದಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬಹುದಾಗಿದೆ.
ಮತದಾರರ ಸೇರ್ಪಡೆಗೆ ನಮೂನೆ-6, ಅನಿವಾಸಿ ಭಾರತೀಯರ ಹೆಸರುಗಳ ಸೇರ್ಪಡೆಗೆ ನಮೂನೆ-6ಎ, ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯಲ್ಲಿ ಉದ್ದೇಶಿತ ಹೆಸರಿನ ಸೇರ್ಪಡೆಗೆ ಆಕ್ಷೇಪಣೆ/ಹೆಸರು ತೆಗೆದು ಹಾಕಲು ನಮೂನೆ-7 ಮತ್ತು ಮತದಾರರ ನಿವಾಸ ಬದಲಾವಣೆ, ಪ್ರಸ್ತುತ ಮತದಾರರ ನಮೂದುಗಳ ತಿದ್ದುಪಡಿ, ಯಾವುದೇ ತಿದ್ದುಪಡಿ ಇಲ್ಲದೆ ಬದಲಿ ಎಪಿಕ್ ನೀಡುವಿಕೆ, ಅಂಗವಿಕಲ ವ್ಯಕ್ತಿ ಎಂದು ಗುರುತಿಸುವುದಕ್ಕೆ ನಮೂನೆ-8ರಲ್ಲಿ ಮನವಿ ಮಾಡಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.