ತುಮಕೂರು | ಕರ್ನಾಟಕ ಪೊಲೀಸ್ ಎಂದರೆ ಇಡೀ ದೇಶದಲ್ಲಿಯೇ ಉತ್ತಮ ಹೆಸರಿದೆ. ಇಂತಹ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತರುವಂತಹ ಘಟನೆ ಇದೀಗ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ನಡೆದಿದೆ. ದೂರು ಕೊಡಲು ಬಂದ ಮಹಿಳೆಯ ಮೇಲೆ ಅನುಚಿತವಾಗಿ ಮಧುಗಿರಿ ಡಿ ವೈ ಎಸ್ ಪಿ ರಾಮಚಂದ್ರಪ್ಪ (DySP Ramachandrappa) ವರ್ತನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮಹಿಳೆ ಮೇಲೆ ಡಿ ವೈ ಎಸ್ ಪಿ ಅಸಭ್ಯ ವರ್ತನೆ
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಡಿ ವೈ ಎಸ್ ಪಿ ರಾಮಚಂದ್ರಪ್ಪ ಪಾವಗಡದಿಂದ ಮಧುಗಿರಿಯ ಡಿ ವೈ ಎಸ್ ಪಿ ಕಚೇರಿಗೆ ಜಮೀನಿನ ವ್ಯಾಜ್ಯದ ಹಿನ್ನೆಲೆ ದೂರು ನೀಡಲು ಬಂದಿದ್ದ ಮಹಿಳೆಯನ್ನು ಪುಸಲಾಯಿಸಿ ಏಕಾಂತ ಸ್ಥಳಕ್ಕೆ ಕರೆದುಕೊಂಡು ಹೋಗಿ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ. ಇನ್ನೂ ಈ ವಿಡಿಯೋವನ್ನು ಕಿಟಕಿಯಲ್ಲಿ ಯಾರೊ ವಿಡಿಯೋ ಮಾಡಿದ್ದು, ಇದೀಗ ಸಾಕಷ್ಟು ವೈರಲ್ ಆಗುತ್ತಿದೆ.
ಗೃಹ ಸಚಿವರ ಜಿಲ್ಲೆ ಮತ್ತು ಸಹಕಾರ ಸಚಿವರ ಸ್ವಕ್ಷೇತ್ರ
ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ತವರು ಜಿಲ್ಲೆ ಮತ್ತು ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರ ಸ್ವಕ್ಷೇತ್ರದಲ್ಲೇ ಪೊಲೀಸ್ ಅಧಿಕಾರಿಯೊಬ್ಬ ಈ ರೀತಿ ನಡೆದುಕೊಂಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಅಧಿಕಾರಿಯ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ವಿಡಿಯೋ ನೋಡಿದ ಸಾರ್ವಜನಿಕರು ಆಗ್ರಹ ಮಾಡಿದ್ದಾರೆ.
ತುಮಕೂರು ಎಸ್ ಪಿ ಅಶೋಕ್ ಪ್ರತಿಕ್ರಿಯೆ
ವಿಡಿಯೋ ವೈರಲ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷರಾದ ಅಶೋಕ್ ಅವರು, ಈ ವಿಡಿಯೋ ನನ್ನ ಗಮನಕ್ಕೆ ಬಂದಿದೆ. ವರದಿ ನೀಡುವಂತೆ ಸೂಚನೆ ನೀಡಿದ್ದೇನೆ. ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ರ ರಾಮಚಂದ್ರಪ್ಪ
ಇನ್ನು ಸಾಕಷ್ಟು ವೈರಲ್ ಆಗುತ್ತಿರುವ ಈ ವಿಡಿಯೋದ ಅಸಲಿಯತ್ತು ಹೊರಬರಬೇಕಿದೆ. ಮಹಿಳೆಯನ್ನು ಡಿ ವೈ ಎಸ್ ಪಿ ರಾಮಚಂದ್ರಪ್ಪ ಪುಸಲಾಯಿಸಿ ಅಸಭ್ಯವಾಗಿ ವರ್ತನೆ ಮಾಡಿದ್ರಾ..? ಅಥವಾ ಮಹಿಳೆಯಿಂದ ಏನಾದರೂ ತಪ್ಪು ಆಗಿದೆಯಾ..? ಹನಿಟ್ರ್ಯಾಪ್ ಗೆ ಡಿ ವೈ ಎಸ್ ಪಿ ರಾಮಚಂದ್ರಪ್ಪ ಸಿಕ್ಕಿಬಿದ್ದಿದ್ದಾರ..? ಎನ್ನುವುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ. ತಪ್ಪಿತಸ್ಥರಿಗೆ ಕಾನೂನು ಕ್ರಮ ಆಗಬೇಕಿದೆ.