ರಾಮನಗರ | ಇಡೀ ರಾಜ್ಯದಲ್ಲಿಯೇ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವುದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸ್ಪರ್ಧೆ ಮಾಡುತ್ತಿರುವಂತಹ ರಾಮನಗರ ಜಿಲ್ಲೆಯ ಕನಕಪುರ ವಿಧಾನಸಭಾ ಕ್ಷೇತ್ರ.
ಇಂದು 2023ರ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನ. ಇದ್ದಕ್ಕಿದ್ದ ಹಾಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿ ಕೆ ಸುರೇಶ್ ಕನಕಪುರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಈ ಹಿಂದೆ ಡಿ ಕೆ ಶಿವಕುಮಾರ್ ಏಪ್ರಿಲ್ 17 ರಂದು ತನ್ನ ಅಪಾರ ಬೆಂಬಲಿಗರೊಡನೆ ರೋಡ್ ಶೋ ನಡೆಸಿ ನಾಮಪತ್ರವನ್ನು ಸಲ್ಲಿಕೆ ಮಾಡಿದ್ರೆ, ಇಂದು ಅವರ ಸಹೋದರ ಡಿ ಕೆ ಸುರೇಶ್ ನಾಮಪತ್ರ ಸಲ್ಲಿಕೆ ಮಾಡಿರುವುದು ಸಾಕಷ್ಟು ಕುತೂಹಲವನ್ನು ಮೂಡಿಸಿದೆ.
ಇನ್ನು ಈ ವೇಳೆ ಮಾತನಾಡಿದ ಡಿ ಕೆ ಸುರೇಶ್, ತಮ್ಮ ಸಹೋದರ ಡಿ ಕೆ ಶಿವಕುಮಾರ್ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಸರ್ಕಾರ ಕುತಂತ್ರ ನಡೆಸಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ನಾನು ಸಹ ಕನಕಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.