ಕಲಬುರಗಿ | ತಾಲ್ಲೂಕಿನ ಹರಕಂಚಿ ಗ್ರಾಮದಲ್ಲಿ ದಲಿತ ವ್ಯಕ್ತಿ ಮೇಲೆ ದುಷ್ಕರ್ಮಿಗಳು ಭೀಕರ ಹಲ್ಲೆ ನಡೆಸಿದ್ದು ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಹಲ್ಲೆಗೊಳಗಾದ ಜಗದೇವಪ್ಪ ಶಂಕರ ಕ್ವಾಟನೂರ (45) ಗಂಭೀರ ಗಾಯಗೊಂಡಿದ್ದು, ಸ್ಥಿತಿ ಚಿಂತಾಜನಕವಾಗಿದೆ.
ಹರಕಂಚಿ ಗ್ರಾಮದ ರೌಡಿಶೀಟರ್ ಶಂಕರ ಪರಮೇಶ್ವರ ನಾಯ್ಕೋಡಿ ಹಾಗೂ ಮಾಣಿಕಪ್ಪ ಶಾಮರಾವ ನಾಯಕೋಡಿ ಸೇರಿ ಗುಂಪುಗೂಡಿಕೊಂಡು ಬಂದು ಹಲ್ಲೆಗೈದಿದ್ದಾರೆ ಎಂದು ಜಗದೇವಪ್ಪ ಕುಟುಂಬಸ್ಥರು ದೂರು ನೀಡಿದ್ದು ಏಳು ಜನರ ವಿರುದ್ಧ ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುವಾರ ರಾತ್ರಿ ಮೆಹಬೂಬ್ ಸುಭಾನಿ ಸಂದಲ್ ಇತ್ತು. ಜಗದೇವಪ್ಪ ಹಾಗೂ ಸ್ನೇಹಿತರಲ್ಲಿದ್ದಲ್ಲಿಗೆ ಬಂದ ಆರೋಪಿ ಶಂಕರ ಸಹಚರರು ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇವರು ಕುಡಿದು ಮತ್ತಿನಲ್ಲಿದ್ದು, ಮನೆಯವರಿಗೆ ಹೇಳಿ ಬರೋಣ ನಡೆಯಿರಿ ಎಂದು ಜಗದೇವಪ್ಪ ಆರೋಪಿ ಶಂಕರ ಮನೆಗೆ ತೆರಳಿದ್ದಾರೆ. ‘ನಮ್ಮ ಮನೆಗೆ ಬರುತ್ತೀಯಾ ನೀನು’ ಎಂದು ಜಗದೇವಪ್ಪ ಅವರ ಮೇಲೆ ಶಂಕರ ರಾಡ್ ನಿಂದ ಹಲ್ಲೆಗೈದಿದ್ದಾನೆ.
ಸ್ಥಳದಲ್ಲೇ ಜಗದೇವಪ್ಪ ಕುಸಿದು ಬಿದ್ದಿದ್ದಾರೆ. ಮತ್ತೆ ದೊಣ್ಣೆಯಿಂದ ಶಂಕರ ಹಾಗೂ ಸಹಚರರು ಹಲ್ಲೆ ಗೈದಿದ್ದಾರೆ. ತೀವ್ರ ಗಾಯಗೊಂಡ ಜಗದೇವಪ್ಪ ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಕುಟುಂಬಸ್ಥರು ಕಲಬುರಗಿ ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಸ್ಪಿ ಅಡ್ಡೂರು ಶ್ರೀನಿವಾಸಲು, ಡಿವೈಎಸ್ಪಿ ಉಮೇಶ ಚಿಕ್ಕಮಠ, ಮಹಾಗಾಂವ ಪಿಎಸ್‌ಐ ಆಶಾ ರಾಠೋಡ, ಕಮಲಾಪುರ ಪಿಎಸ್‌ಐ ಸಂಗೀತಾ ಶಿಂಧೆ ಇದ್ದರು.