ಬೆಂಗಳೂರು | ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಕನಕಪುರ ಶಾಸಕರಾಗಿ ಆಯ್ಕೆಯಾದ ಡಿ ಕೆ ಶಿವಕುಮಾರ್ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ ಡಿ ಕೆ ಶಿವಕುಮಾರ್ ಅವರಿಗೆ ಪ್ರಮಾಣವಚನ ಬೋಧಿಸಿದರು.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ತಮ್ಮದೇ ಆದಂತಹ ಪ್ಲಾನ್ ಗಳನ್ನು ಬಳಸಿ ಕೊನೆಗೂ ಅದರಲ್ಲಿ ಯಶಸ್ವಿಯಾದ ನಾಯಕ ಡಿ ಕೆ ಶಿವಕುಮಾರ್. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಡಿ ಕೆ ಶಿವಕುಮಾರ್ ಗೆ ಅಹಿಂದ ನಾಯಕ ಸಿದ್ದರಾಮಯ್ಯ ಎದುರಾಳಿಯಾಗಿದ್ದರು.
ಇವರಿಬ್ಬರ ಮೇಲೆ ಇದ್ದಂತಹ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಕಳೆದು ಹೈಕಮಾಂಡ್ ರಾಜಿ ಸಂಧಾನಗಳನ್ನು ಮಾಡಿ ಎಲ್ಲವನ್ನು ಕೂಡ ಸುಖಾಂತ್ಯ ಮಾಡಿದ್ದಾರೆ. ಒಬ್ಬರೇ ಉಪಮುಖ್ಯಮಂತ್ರಿ ಎಂಬ ಕಂಡಿಶನ್ ಗೆ ಒಪ್ಪಿ ಡಿ ಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಇನ್ನು ಪ್ರಮಾಣವಚನ ಸ್ವೀಕರಿಸಿ ಸಹಿ ಮಾಡಿದ ನಂತರ ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ ಹೂಗುಚ್ಚ ನೀಡಿ ಅಭಿನಂದಿಸಿದರು. ಈ ವೇಳೆ ನೇರವಾಗಿ ತಮ್ಮ ಕುರ್ಚಿಗೆ ಹೋಗಿ ಕುಳಿತುಕೊಂಡ ಡಿ ಕೆ ಶಿವಕುಮಾರ್ ಯಾವ ನಾಯಕರಿಗೂ ಹಸ್ತಲಾಘವ ಮಾಡುವ ಪ್ರಯತ್ನ ಮಾಡಲಿಲ್ಲ. ಸಿದ್ದರಾಮಯ್ಯ ಕಡೆಯಂತೂ ತಿರುಗಿ ನೋಡಲಿಲ್ಲ. ಎಲ್ಲೋ ಒಂದು ಕಡೆ ಇನ್ನು ಮುನಿಸು ಇರಬಹುದು ಎಂದು ಗಾಳಿ ಸುದ್ದಿ ಹರಿದಾಡುತ್ತಿದೆ.