ಬೆಂಗಳೂರು | ಗುತ್ತಿಗೆದಾರರ ಬಾಕಿ ಉಳಿಸಿಕೊಂಡಿರುವ ಕಾಮಗಾರಿಗೆ 30 ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಶುಕ್ರವಾರ ಸರ್ಕಾರಕ್ಕೆ ಬೆದರಿಕೆ ಹಾಕಿದ್ದಾರೆ.
ಕೂಡಲೇ ಶೇ.50ರಷ್ಟನ್ನಾದರೂ ಹಣ ಬಿಡುಗಡೆ ಮಾಡಬೇಕು ಎಂದ ಅವರು, ‘ಆಯ್ದ’ ಗುತ್ತಿಗೆದಾರರ ಬಿಲ್ ಮಾತ್ರ ಈಗ ಕ್ಲಿಯರ್ ಆಗುತ್ತಿದ್ದು, ಹಿರಿತನಕ್ಕೆ ತಕ್ಕಂತೆ ಹಣ ಪಾವತಿಯಾಗುತ್ತಿಲ್ಲ ಎಂದು ಆರೋಪಿಸಿದರು.
ಸರ್ಕಾರದಿಂದ ಸರಿಯಾದ ಹಣ ಬಂದಿಲ್ಲ. ಕೆಲವೇ ಪಾವತಿಗಳನ್ನು ಮಾಡಲಾಗಿದೆ. ನಾಲ್ಕು ಬಾರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು (ಬಾಕಿ ಪರಿಹಾರ) ಮನವಿ ಮಾಡಿದ್ದರೂ ಏನೂ ಆಗಿಲ್ಲ. ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ ಎಂದು ಕೆಂಪಣ್ಣ ಹೇಳಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುಕಾಲದಿಂದ ಬಾಕಿ ಹಣ ಬಂದಿಲ್ಲ ಎಂಬ ಕಾರಣಕ್ಕೆ ಒಂದೆರಡು ಗುತ್ತಿಗೆದಾರರು ಆತ್ಮಹತ್ಯೆಗೂ ಯತ್ನಿಸಿದ್ದಾರೆ. ‘ಆಯುಧಪೂಜೆಯಂತಹ ಹಬ್ಬಗಳು ಬರುವುದರಿಂದ ಶೇ.50ರಷ್ಟನ್ನಾದರೂ ಕೂಡಲೇ ಬಿಡುಗಡೆ ಮಾಡಬೇಕು’. ಕೆಲವೇ ಕೆಲವು ‘ಆಯ್ದ’ ಗುತ್ತಿಗೆದಾರರ ಬಿಲ್‌ಗಳನ್ನು ಚೆಕ್ ಮೂಲಕ ಕ್ಲಿಯರ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಭರವಸೆ ನೀಡಿದರೂ ಜೇಷ್ಠತೆ ಪಾಲನೆಯಾಗುತ್ತಿಲ್ಲ ಎಂದು ಆರೋಪಿಸಿದ ಕೆಂಪಣ್ಣ, ‘ಪಾವತಿ ಎಲ್ಲಿ ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಅಧಿಕಾರಿಗಳೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದರು. ಈ ಬಗ್ಗೆ ಸರಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಕ್ರಮದ ಬಗ್ಗೆ ನಮ್ಮ ಕಾರ್ಯಕಾರಿಣಿ ಸಭೆ ತೀರ್ಮಾನಿಸಲಿದೆ… ಮೊದಲು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಪ್ರಯತ್ನಿಸುತ್ತೇವೆ ಎಂದರು. 30 ದಿನದಲ್ಲಿ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದ ಅವರು, ರಾಜ್ಯದಲ್ಲಿ ಗುತ್ತಿಗೆದಾರರ ಸ್ಥಿತಿ ರೈತರಿಗಿಂತ ಹೀನಾಯವಾಗಿದೆ ಎಂದಿದ್ದಾರೆ.