ತುಮಕೂರು | 2024ರ ಲೋಕಸಭೆ ಚುನಾವಣೆಗೆ (Lok Sabha Elections) ಕ್ಷಣಗಣನೆ ಆರಂಭವಾಗಿದೆ. ಅಭ್ಯರ್ಥಿಗಳ ಘೋಷಣೆ ಬಹುತೇಕವಾಗಿದೆ. ಉಳಿದಂತೆ ಅಭ್ಯರ್ಥಿಗಳು (candidates) ಮಠಮಾನ್ಯಗಳಿಗೆ ಭೇಟಿ ನೀಡುವುದು ಸರ್ವೇಸಾಮಾನ್ಯವಾಗಿದೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ (Chitradurga Lok Sabha Constituency) ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಗೋವಿಂದ ಕಾರಜೋಳ (Govinda Karajola) ಅವರು, ಇದೀಗ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಶ್ರೀಗಳ ಆಶೀರ್ವಾದವನ್ನು ಪಡೆದಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರಗಳು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡಲಿದ್ದು, ಈ ಎರಡು ಕ್ಷೇತ್ರಗಳಲ್ಲೂ ಕೂಡ ಗೋವಿಂದ ಕಾರಜೋಳ ಅವರು ಪ್ರಚಾರ ಕೈಗೊಳ್ಳಲಿದ್ದಾರೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಎ ನಾರಾಯಣಸ್ವಾಮಿ ಅವರಿಗೆ ಪಕ್ಷದ ಹೈಕಮಾಂಡ್ ಟಿಕೆಟ್ ಕೈತಪ್ಪಿಸಿದ್ದು, ಈ ಬಾರಿ ಬಾಗಲಕೋಟೆ ಮೂಲದ ಗೋವಿಂದ ಕಾರಜೋಳ ಅವರಿಗೆ ಮಣೆ ಹಾಕಿದೆ. ಉಳಿದಂತೆ ಗೋವಿಂದ ಕಾರಜೋಳ ಅವರು ಕಳೆದ ವಿಧಾನಸಭೆ ಉಪಚುನಾವಣೆಯ ವೇಳೆ ಶಿರಾ ಕ್ಷೇತ್ರದಲ್ಲಿ ಬೀಡು ಬಿಟ್ಟು, ಪಕ್ಷದ ಅಭ್ಯರ್ಥಿಯ ಗೆಲುವಿಗೆ ಉಸ್ತುವಾರಿಯಾಗಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ರಾಜಕೀಯ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ.