ತುಮಕೂರು | ಚಂದ್ರಶೇಖರನಾಥ ಸ್ವಾಮೀಜಿ (Chandrashekarnath Swamiji) ಮೇಲೆ ಎಫ್ ಐ ಆರ್ ಮಾಡಿರುವುದನ್ನು ಖಂಡಿಸಿ, ಸರ್ಕಾರ ಹಿಂದೂ ಸಮಾಜದವರಿಗೆ ಕ್ಷಮೆ ಕೇಳಬೇಕು ಎಂದು ತುಮಕೂರು ಜಿಲ್ಲಾಧಿಕಾರಿಗಳಿಗೆ ಹಿಂದು ಹಿತರಕ್ಷಣಾ ಸಮಿತಿ ಮನವಿಯನ್ನು ನೀಡಿದೆ.
ವಕ್ಫ್ ವಿಚಾರವಾಗಿ ಪ್ರತಿಭಟನೆಯ ವೇಳೆ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರು ಹಿಂದುಗಳ ಭೂಮಿಯನ್ನು ಅತಿಕ್ರಮಿಸಿಕೊಳ್ಳುತ್ತಿರುವುದಕ್ಕೆ ಮೂಲ ಕಾರಣ ತುಷ್ಠೀಕರಣ ರಾಜಕೀಯ. ಹೀಗಾಗಿ ಅವರ ಮತದಾನದ ಹಕ್ಕನ್ನು ರದ್ದು ಮಾಡಿದರೆ ಹಿಂದುಗಳಿಗೆ ಆಗುತ್ತಿರುವ ಅನ್ಯಾಯ ಪರಿಹಾರವಾಗುತ್ತದೆ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದರು. ಇದಕ್ಕೆ ವಿರುದ್ಧವಾಗಿ ಸರ್ಕಾರ ಅವರಿಗೆ ನೋಟಿಸ್ ನೀಡಿ ಪೋಲಿಸ್ ಠಾಣೆಗೆ ಬರುವಂತೆ ಸೂಚನೆ ನೀಡುವುದು ನಿಜಕ್ಕೂ ಕೂಡ ಆತಂಕಕಾರಿ ಬೆಳವಣಿಗೆ ಎಂದಿದೆ.
ಭಾರತದಲ್ಲಿ ಮತದಾನ ಎನ್ನುವುದು ಅನುಚ್ಛೇದ 326ರ ಅಡಿಯಲ್ಲಿ ಬರುವ ಸಂವಿಧಾನಿಕ ಹಕ್ಕು ಆದರೆ ಇದು ಎಲ್ಲಾ ಪ್ರಜೆಗಳಿಗೂ ಇರುವಂತಹ ಮೂಲಭೂತ ಹಕ್ಕಲ್ಲ, ಇದಕ್ಕೆ ವಯಸ್ಸು, ಅನರ್ಹತೆ, ಕ್ರಿಮಿನಲ್ ಹಿನ್ನಲೆ, ಮಾನಸಿಕ ಸ್ಥಿಮಿತ ಸೇರಿ ಅನೇಕ ಅಂಶಗಳು ಕೂಡ ಆಧಾರವಾಗಿವೆ.
ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರು ಮಾತನಾಡಿರುವುದು ಸಾಮಾಜಿಕ ಶಾಂತಿಯ ಹಿನ್ನೆಲೆಯಲ್ಲಿ, ರಾಜಕೀಯ ಪಕ್ಷಗಳು ಮುಸ್ಲಿಂ ತುಷ್ಟಿಕರಣವನ್ನು ಮಾಡುವುದು ವೋಟಿನ ಕಾರಣಕ್ಕೆ ಈ ತುಷ್ಟಿಕರಣದ ಭಾಗವೇ ವಕ್ಫ್. ಇದರಿಂದಾಗಿ ರೈತರ ಜಮೀನು ಕಬಳಿಕೆಯಾಗಿದೆ ಸಮಾಜದಲ್ಲಿ ಅಶಾಂತಿ ಮೂಡುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸ್ವಾಮೀಜಿಯವರ ಮಾತನ್ನು ಒಪ್ಪಲೇಬೇಕೆಂದಿಲ್ಲವಾದರೂ ಅದೇನು ಸಂವಿಧಾನಕ್ಕೆ, ಸಾಮಾಜಿಕ ಶಾಂತಿಗೆ ವಿರುದ್ಧವಾದ ಮಾತಲ್ಲ, ಅವರು ಸಮಾಜದ ಶಾಂತಿಯನ್ನು ಗಮನದಲ್ಲಿರಿಸಿಕೊಂಡೇ ಮಾತನಾಡಿದ್ದಾರೆ. ಸಮಾಜಕ್ಕೆ ಎದುರಾದ ಸಂಕಷ್ಟದ ನೋವು ಅವರ ಹೃದಯದಲ್ಲಿ ಇದೆ ಎಂದಿದ್ದಾರೆ.
ಸ್ವಾಮೀಜಿಗಳ ಮೇಲಿರುವ ಎಫ್ ಐ ಆರ್ ರದ್ದು ಮಾಡಿ ಪ್ರಕರಣವನ್ನು ಹಿಂಪಡೆದು ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ರಾಜ್ಯ ಸರ್ಕಾರ ಸಮಸ್ತ ಹಿಂದೂ ಸಮಾಜಕ್ಕೆ ಕ್ಷಮೆ ಕೋರಬೇಕೆಂದು ಆಗ್ರಹ ಮಾಡುವುದರ ಜೊತೆಗೆ ತಾವು ನೀಡಿರುವ ಪ್ರಕರಣವನ್ನು ಹಿಂಪಡೆಯದೇ ಇದ್ದರೆ ರಾಜ್ಯ ವ್ಯಾಪಿ ಹೋರಾಟವನ್ನು ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.