ಬೆಳಗಾವಿ | ರಾಜ್ಯಾದ್ಯಂತ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ವಿವಿಧ ಸ್ಥಳಗಳಲ್ಲಿ 5 ಲಕ್ಷ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ (Camera installation) ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.
ರಾಜ್ಯದಲ್ಲಿ ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಇವುಗಳ ನಿಯಂತ್ರಣಕ್ಕೆ ಇನ್ನು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಾಗುವುದು ಎಂದರು.
ಮಹಿಳೆಯರು ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ದೌರ್ಜನ್ಯ ನಡೆಯುವುದನ್ನು ತಡೆಯಲು ಸೇಫ್ಟಿ ಐಲ್ಯಾಂಡ್ ಗಳನ್ನು ರಚಿಸಲಾಗಿದೆ. ಮಹಿಳೆಯರು ದೂರು ನೀಡಲು ಅನುಕೂಲವಾಗುವಂತೆ ಸಹಾಯವಾಣಿ ಸಂಖ್ಯೆ 1091 ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕುರಿತು ದೂರು ನೀಡಲು ಸಹಾಯವಾಣಿ 1098 ಮೂಲಕ 24*7 ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.
ನ್ಯಾಯಾಲಯಗಳಲ್ಲಿ ಈಗಾಗಲೇ ದಾಖಲಾಗಿರುವ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಮತ್ತು ಪೋಕ್ಸೋ ಪ್ರಕರಣಗಳ ವಿಚಾರಣೆ ಬೇಗ ಇತ್ಯರ್ಥವಾಗುವ ಕುರಿತಂತೆ ಹೆಚ್ಚು ಗಮನಹರಿಸಲಾಗುವುದು ಎಂದರು.