ಬೆಳಗಾವಿ | ಬಾಣಂತಿಯರ ಸಾವಿನ (Bananti’s death) ಪ್ರಕರಣದ ತನಿಖೆಯನ್ನು ಎಸ್‌ಐಟಿ ಅಥವಾ ನ್ಯಾಯಾಂಗ ತನಿಖೆಯೋ ಅಥವಾ ಜಂಟಿ ಸದನ ಸಮಿತಿ ಮೂಲಕ ನಡೆಸಬೇಕೋ ಎಂಬುದನ್ನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ದಿನೇಶ ಗುಂಡೂರಾವ್ ತಿಳಿಸಿದ್ದಾರೆ.
ಮೇಲ್ಮನೆಯಲ್ಲಿ ಬಾಣಂತಿಯರ ಸಾವಿನ ಬಗ್ಗೆ ನಡೆದ ಸುದೀರ್ಘ ಚರ್ಚೆಯ ನಂತರ ಉತ್ತರಿಸಿದ ಅವರು, ಎಲ್ಲ ವಿಧದ ರೂಪದಲ್ಲಿಯೂ ತನಿಖೆ ನಡೆಸಲು ಸರ್ಕಾರ ಬದ್ಧವಾಗಿದೆ, ಯಾವ ರೀತಿಯಲ್ಲಿಯೂ ಮುಚ್ಚಿ ಹಾಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.
ಡ್ರಗ್ಸ್ ಮಾಫಿಯಾ ಜಾಲ ನಿಯಂತ್ರಣಕ್ಕೆ ಸಿಗದಂತಾಗಿದೆ ಎಂಬ ಅಸಹಾಯಕತೆಯನ್ನು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದ ಸಚಿವ ಗುಂಡೂರಾವ್, ವಿದೇಶಕ್ಕೆ ಪೂರೈಕೆಯಾಗುವ ಔಷಧಿಗಳ ಗುಣಮಟ್ಟ ಒಂದಾದರೆ, ಸ್ಥಳೀಯವಾಗಿ ಪೂರೈಕೆಯಾಗುವ ಔಷಧಿಗಳ ಗುಣಮಟ್ಟ ಇನ್ನೊಂದಾಗಿದೆ, ಇದು ಈ ರೀತಿ ಆಗಬಾರದು, ಗುಣಮಟ್ಟದಲ್ಲಿ ಯಾವ ರಾಜಿಯೂ ಇರಬಾರದು, ಬಾಣಂತಿಯರ ಸಾವಿನ ಪ್ರಕರಣಗಳು ಒಂದು ರೀತಿ ವ್ಯವಸ್ಥೆಯ ವೈಫಲ್ಯವೇ ಎಂಬುದನ್ನು ಗುಂಡೂರಾವ್ ಒಪ್ಪಿಕೊಂಡರು.
ಆರ್‌ಎಲ್ ದ್ರಾವಣ ಪೂರೈಸಿದ ಪಶ್ಚಿಮ ಬಂಗಾಳ ಫಾರ್ಮಾಸ್ಯೂಟಿಕಲ್ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅವರಿಗೆ ಪತ್ರ ಬರೆಯಲಾಗಿದೆ, ಇದು ಒಂದು ರೀತಿ ಕ್ಷಮಾಪಣೆ ಇಲ್ಲದ ಅಪರಾಧ, ಕಂಪನಿ ಮೇಲೆ ಕ್ರಮವಲ್ಲ ಕಂಪನಿಯೇ ಸಂಪೂರ್ಣ ಬಂದ್ ಆಗಬೇಕು ಎಂಬುದು ನನ್ನ ಭಾವನೆ ಎಂದರು. ಸಂತ್ರಸ್ತ ಕುಟುಂಬಗಳಿಗೆ ಜೀವವನ್ನು ಮರಳಿ ತರಲು ಸಾಧ್ಯವಿಲ್ಲ, ಆದರೆ ಪರಿಹಾರ ರೂಪವಾಗಿ ಐದು ಲಕ್ಷ ರೂ.ಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂದರು.