ಮನರಂಜನೆ | ಒಂದು ಸಾಧಾರಣ ಬಜೆಟ್ ನಲ್ಲಿ ಸಿನಿಮಾ ಮಾಡಬೇಕೆಂದುಕೊಂಡರೆ, ಸಿನಿಮಾ ತಂಡಗಳು ಹೆಚ್ಚಾಗಿ ಥ್ರಿಲ್ಲರ್ ಸಿನಿಮಾಗಳನ್ನೇ ಆಯ್ದುಕೊಳ್ಳುತ್ತಾರೆ. ಶುಭಾ ಪೂಂಜಾ ನಟಿಸಿರುವ ‘ಅಂಬುಜಾ’ ಸಿನಿಮಾ ಕೂಡಾ ಥ್ರಿಲ್ಲರ್ ಮಾದರಿಯ ಕಥೆಯನ್ನು ಹೊಂದಿದ್ದು, ಮೊದಲ ಚಿತ್ರದಲ್ಲೂ ಒಂದು ಥ್ರಿಲ್ಲರ್ ಕಥೆಯೇಳಿದ್ದ ನಿರ್ದೇಶಕ ಶ್ರೀನಿ ಇಲ್ಲೂ ಕಡೆ ಅದೇ ಮಾದರಿಯ ಸಿನಿಮಾವನ್ನು ಅಚ್ಚುಕಟ್ಟಾಗಿ ತೆರೆ ಮೇಲೆ ತಂದಿದ್ದಾರೆ.
ಈ ಕಥೆಯಲ್ಲಿ ಹಳ್ಳಿಯೊಂದರಿಂದ ಬರುವ ಹೆಣ್ಣುಮಕ್ಕಳು ಬೆಂಗಳೂರಿನಲ್ಲಿ ಕೊಲೆಯಾಗುತ್ತಿರುತ್ತಾರೆ ಯಾಕೆ ,ಯಾರಿಂದ ಕೊಲೆಯಾಗುತ್ತಿರುತ್ತಾರೆ ಎಂಬುದೇ ಸಿನಿಮಾದ ಒನ್ ಲೈನ್ ಕಥೆ.
ಇದೊಂದು ಥ್ರಿಲ್ಲರ್ ಸಿನಿಮಾ ಹಾಗಾಗಿ ಕಥೆಯನ್ನು ಹೆಚ್ಚು ರಿವೀಲ್ ಮಾಡಿದರೆ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದಾಗ ಸ್ವಾರಸ್ಯವಿರುವುದಿಲ್ಲ. ಹಲವು ಸಿನಿಮಾಗಳಿಗಿಂತಲೂ ಇದು ವಿಭಿನ್ನವಾದ ಥ್ರಿಲ್ಲರ್, ಚಿತ್ರ ಆರಂಭವಾದಾಗಿನಿಂದಲೂ ಥ್ರಿಲ್ಲಿಂಗ್ ಚಿತ್ರಕಥೆಯ ಮೂಲಕ ನಿರ್ದೇಶಕರು ಕಥೆ ಹೇಳುತ್ತಾ ಹೋಗುತ್ತಾರೆ. ಪತ್ರಕರ್ತರೊಬ್ಬರ ತನಿಖೆಯಿಂದಾಗಿ ತೆರೆದುಕೊಳ್ಳುವ ಸಿನಿಮಾ, ಹಲವು ಆಯಾಮಗಳನ್ನು ತೆರೆದುಕೊಳ್ಳುತ್ತಾ ಪ್ರೇಕ್ಷಕನನ್ನು ತನ್ನೊಳಗೆ ಎಳೆದುಕೊಳ್ಳುತ್ತದೆ. ಇಡೀ ಸಿನಿಮಾದ ಹೈಲೈಟ್ ಎಂದರೆ ಕ್ಲೈಮ್ಯಾಕ್ಸ್. ಚಿತ್ರದಲ್ಲಿ ಒಂದು ಗಂಭೀರವಾದ ಮೆಡಿಕಲ್ ಮಾಫಿಯಾದ ಕುರಿತಾಗಿ ಹೇಳಲಾಗಿದ್ದು, ಅದನ್ನು ನಿರ್ದೇಶಕ ಶ್ರೀನಿ ಅದ್ಬುತವಾಗಿ ಚಿತ್ರೀಕರಿಸಿದ್ದಾರೆ.
ಪತ್ರಕರ್ತೆಯಾಗಿ ಶುಭಾ ಪೂಂಜಾ ಅವರದ್ದು ಉತ್ತಮ ನಟನೆ, ರಜನಿ , ದೀಪಕ್ ಸುಬ್ರಹ್ಮಣ್ಯ ಸೇರಿದಂತೆ ಎಲ್ಲರೂ ಉತ್ತಮವಾಗಿ ನಟಿಸುವ ಮೂಲಕ ಅಂಬುಜಾಳ ಶಕ್ತಿ ಹೆಚ್ಚಿಸಿದ್ದಾರೆ. ಗೋವಿಂದೇಗೌಡ ಅವರ ಕಾಮಿಡಿ ಚಿತ್ರಕ್ಕೆ ಯಾವುದೇ ಸಹಾಯ ಮಾಡಿಲ್ಲ. ಸಿನಿಮಾದ ಹಿನ್ನಲೆ ಸಂಗೀತ ಕಥೆಗೆ ಪೂರಕವಾಗಿದೆ. ಕಥೆಗೆ ಪೂರಕವಾದ ರೋಚಕತೆ ಮತ್ತು ಮೇಕಿಂಗ್ ಎಲ್ಲವೂ ಇರುವುದರಿಂದ ಅಂಬುಜಾಳನ್ನು ಒಮ್ಮೆ ಚಿತ್ರಮಂದಿರದಲ್ಲಿ ನೋಡಿಕೊಂಡು ಬರಬಹುದು.