ತುಮಕೂರು | ಜಿಲ್ಲೆಯಲ್ಲಿ ಚುನಾವಣಾ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಿದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್ ಪ್ರಶಂಸೆ ವ್ಯಕ್ತಪಡಿಸಿದರು.
ಚುನಾವಣಾ ಪ್ರಕ್ರಿಯೆಯು ಶಾಂತಿಯುತವಾಗಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ಇಲಾಖೆ ಅಧಿಕಾರಿ/ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ತಿಳಿಸಲು ಏರ್ಪಡಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾತನಾಡಿ ಅವಿರತವಾಗಿ ಚುನಾವಣಾ ಕರ್ತವ್ಯ ನಿರ್ವಹಿಸಿದ ಅಧಿಕಾರಿ/ ಸಿಬ್ಬಂದಿಗಳ ಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, 2022 ರ ಅಕ್ಟೋಬರ್ ಮಾಹೆಯಿಂದಲೇ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯದಿಂದ ಪ್ರಾರಂಭಗೊಂಡ ಚುನಾವಣಾ ಕೆಲಸಗಳು ಮೇ 15 ಕ್ಕೆ ಮುಕ್ತಾಯಗೊಂಡಿದೆ. ಆಯಾ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ತಹಶೀಲ್ದಾರರು, ಪಾಲಿಕೆ ಅಧಿಕಾರಿಗಳು ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗುವ ಮುಂಚಿನಿಂದಲೂ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಹಗಲಿರುಳು ಶ್ರಮಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ), ಆಶಾ/ಅಂಗನವಾಡಿ ಕಾರ್ಯಕರ್ತೆಯರು, ಮತಗಟ್ಟೆ ಮಟ್ಟದ ಅಧಿಕಾರಿಗಳ ಮೇಲ್ವಿಚಾರಕರು ತಳಮಟ್ಟದಲ್ಲಿ ಕೆಲಸ ಮಾಡಿರುವುದನ್ನು ಮರೆಯುವಂತಿಲ್ಲ ಎಂದರಲ್ಲದೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಪಟ್ಟಿಯಿಂದ ತೆಗೆದು ಹಾಕುವುದು ಸೇರಿದಂತೆ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ಜಟಿಲವಾಗದಂತೆ ಅಚ್ಚುಕಟ್ಟಾಗಿ ನಿರ್ವಹಿಸಿದ ಎಲ್ಲಾ ಅಧಿಕಾರಿ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು.
ಪ್ರಮುಖವಾಗಿ ತುಮಕೂರು ಗ್ರಾಮಾಂತರ, ತುರುವೇಕೆರೆ, ಕುಣಿಗಲ್ ವಿಧಾನಸಭಾ ಕ್ಷೇತ್ರಗಳ ಸೂಕ್ಷ್ಮ ಮತಗಟ್ಟೆಗಳಲ್ಲಿ ಯಾವುದೇ ಗಲಭೆ/ಗಲಾಟೆಯಾಗದಂತೆ ಶಾಂತಿಯುತವಾಗಿ ಮತದಾನ ನಡೆಯಲು ಕಾರಣವಾದ ಪೊಲೀಸ್ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳ ಕರ್ತವ್ಯ ಪಾಲನೆ ಶ್ಲಾಘನೀಯವಾದುದು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ ವಿದ್ಯಾಕುಮಾರಿ ಅವರ ಅನುಭವ, ಚುನಾವಣಾ ಕರ್ತವ್ಯದ ಮೇಲೆ ಅವರಿಗಿದ್ದ ಕ್ಷಮತೆ ಹಾಗೂ ಕಾಳಜಿಯಿಂದ ಪಾರದರ್ಶಕ ಚುನಾವಣೆ ನಡೆಸಲು ಸಾಧ್ಯವಾಯಿತಲ್ಲದೆ ಅಧಿಕಾರಿಗಳ ಸಮನ್ವಯತೆಯೇ ಈ ಚುನಾವಣೆ ಯಶಸ್ಸಿನ ಗುಟ್ಟು ಎಂದು ತಿಳಿಸಿದರು.
ಕಂದಾಯ ಇಲಾಖೆಯ ಶಿರಸ್ತೆದಾರರು, ವಿಷಯ ನಿರ್ವಾಹಕರು, ಚುನಾವಣಾ ಶಾಖೆ ಸಿಬ್ಬಂದಿ, ವಾಹನ ಚಾಲಕರು, ಗನ್‌ಮ್ಯಾನ್‌ಗಳು, ಗ್ರೂಪ್ ಡಿ ಸಿಬ್ಬಂದಿಗಳು ಹಗಲಿರುಳೆನ್ನದೆ ನಿರ್ವಹಿಸಿದ ಸೇವೆಯನ್ನು ಸ್ಮರಿಸಲೇಬೇಕು ಎಂದು ತಿಳಿಸಿದರು.
ವಿಶ್ವವಿದ್ಯಾನಿಲಯದ ಕುಲಸಚಿವೆ ನಹೀದಾ ಜಂಜಂ, ಎನ್‌ಐಸಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಯಾವುದೇ ಗೊಂದಲ ಸೃಷ್ಟಿಯಾಗದಂತೆ ಮೇ 10 ರ ಮತದಾನ ದಿನದ ಕರ್ತವ್ಯಕ್ಕೆ ಸಿಬ್ಬಂದಿಗಳ ನಿಯೋಜನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಆಪ್ತ ಶಾಖೆ ಸಿಬ್ಬಂದಿಗಳು, ಮತ ಎಣಿಕಾ ಕೇಂದ್ರಕ್ಕೆ ಸಕಲ ವ್ಯವಸ್ಥೆ ಮಾಡಿದ ನಿರ್ಮಿತಿ ಕೇಂದ್ರದ ಅಧಿಕಾರಿ, ಪ್ರವಾಸಿ ಮಂದಿರಗಳ ನಿರ್ವಹಣೆ ಮಾಡಿದ ಲೋಕೋಪಯೋಗಿ ಇಲಾಖೆ, ಅಬಕಾರಿ ಇಲಾಖೆ, ಆಹಾರ ಇಲಾಖೆ, ಕಾಲ ಕಾಲಕ್ಕೆ ಮಾಧ್ಯಮದವರಿಗೆ ಚುನಾವಣಾ ಸಂಬAಧಿತ ಸುದ್ದಿ ತಲುಪಿಸಿದ ವಾರ್ತಾ ಇಲಾಖೆ, ಎಲ್ಲಾ ನೋಡಲ್ ಅಧಿಕಾರಿಗಳು, ಲೈಸನ್ ಅಧಿಕಾರಿಗಳು, ಚುನಾವಣಾ ಅಕ್ರಮ ಪತ್ತೆ ಹಚ್ಚಲು ನಿಯೋಜಿಸಿದ್ದ ಎಸ್‌ಎಸ್‌ಟಿ, ವಿಎಸ್‌ಟಿ, ಎಫ್‌ಎಸ್‌ಟಿ ತಂಡಗಳು, ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಕೋಶ, ಚುನಾವಣಾ ವೀಕ್ಷಕರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿರುವುದರಿಂದಲೇ ಯಶಸ್ವಿ ಚುನಾವಣೆ ಜರುಗಲು ಕಾರಣವಾಯಿತು ಎಂದು ತಿಳಿಸಿದರು.
ಶಾಂತಿಯುತ ಮತದಾನಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಸಹಕಾರ ಹಾಗೂ ಮಾಧ್ಯಮದವರ ಸಹಕಾರ ಸ್ತುತ್ಯಾರ್ಹವಾದುದು ಎಂದು ತಿಳಿಸಿದರಲ್ಲದೆ, ಮುಂದಿನ ಚುನಾವಣೆಗಳಲ್ಲಿ ಅಧಿಕಾರಿ/ಸಿಬ್ಬಂದಿಗಳು ಇದೇ ರೀತಿ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪೂರ್‌ವಾಡ್ ಮಾತನಾಡಿ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಅಪರ ಜಿಲ್ಲಾಧಿಕಾರಿಗಳ ಮುಂದಾಳತ್ವದಿಂದ ಮಾತ್ರ ಜಿಲ್ಲೆಯಲ್ಲಿ ಒತ್ತಡ ಮುಕ್ತ ಹಾಗೂ ಶಾಂತಿಯುತ ಚುನಾವಣೆ ಸಾಧ್ಯವಾಯಿತು ಎಂದರು.
ಪೊಲೀಸ್ ಇಲಾಖೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿದ್ಧಾರ್ಥ ಹಾಗೂ ಮರಿಯಪ್ಪ, ಡಿವೈಎಸ್‌ಪಿ ಧರ್ಮೇಂದ್ರ, ನವೀನ್‌ರೆಡ್ಡಿ ಸೇರಿದಂತೆ ಪೊಲೀಸ್ ಅಧಿಕಾರಿಗಳ ತಂಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಬಾರದಂತೆ ಮತದಾರರು ನಿರ್ಭೀತಿಯಿಂದ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಲು ಶಾಂತಿಯುತ ಮತದಾನ ವಾತಾವರಣ ನಿರ್ಮಾಣಕ್ಕಾಗಿ ಶ್ರಮಿಸಿರುವುದು ಅಭಿನಂದನಾರ್ಹ ಎಂದು ತಿಳಿಸಿದರಲ್ಲದೆ ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಸೀಡಿಂಗ್ ಮಾಡುವಲ್ಲಿ ಪ್ರಶಸ್ತಿ ಗಳಿಸಿರುವ ಜಿಲ್ಲೆಯ ಕಾರ್ಯವೈಖರಿಗೆ ಚುನಾವಣಾ ಆಯೋಗದಿಂದ ನಡೆಸಲಾದ ಪ್ರತೀ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಪ್ರಶಂಸೆಗಳೇ ದೊರೆತಿದ್ದು, ಯಾವುದೇ ಗೊಂದಲವಿಲ್ಲದೆ ದೋಷಮುಕ್ತವಾಗಿ ಚುನಾವಣೆ ನಡೆಸುವಲ್ಲಿ ತುಮಕೂರು ಜಿಲ್ಲೆ ಮಾದರಿಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ ಮಾತನಾಡಿ, ಪ್ರತಿ ಹಂತದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿಗಳು, ನೋಡಲ್ ಅಧಿಕಾರಿಗಳಿಗೆ ನೀಡಿರುವ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದಾರೆ. ಇದರೊಂದಿಗೆ ಚುನಾವಣಾ ಮತದಾನ ಕರ್ತವ್ಯ ನಿಯೋಜಿತರಿಗೆ ತರಬೇತಿ ನೀಡುವ, ಅಂಚೆ ಮತದಾನದ ಕಾರ್ಯ ನಿರ್ವಹಿಸಿದ ಭೂದಾಖಲೆಗಳ ಇಲಾಖೆ ಅಧಿಕಾರಿಗಳು, ವಿದ್ಯುನ್ಮಾನ ಮತಯಂತ್ರದ ನಿರ್ವಹಣಾ ತಂಡ, ಚೆಕ್‌ಪೋಸ್ಟ್ಗಳಲ್ಲಿ ನೇಮಕವಾದ ವಿಚಕ್ಷಣದಳ, ಚುನಾವಣಾ ಅಕ್ರಮಗಳ ದೂರು ನಿರ್ವಹಣಾ ಶಾಖೆಯ ಅಧಿಕಾರಿ/ಸಿಬ್ಬಂದಿಗಳು ಸುವ್ಯವಸ್ಥಿತವಾಗಿ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸಿದ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ, ಗ್ರಾಮ ಮಟ್ಟದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾವಹಿಸಿದ ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳು, 335 ಮತಗಟ್ಟೆಗಳನ್ನು ವಿಶೇಷವಾಗಿ ಅಲಂಕರಿಸುವ ಕಾರ್ಯ ನಿರ್ವಹಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೂ ಸಹ ಮಾದರಿ ಮತದಾನಕ್ಕೆ ಕಾರಣರಾಗಿದ್ದಾರೆ. ಪಿಡಿಓಗಳು ರಾಜ್ಯದಲ್ಲಿ ಹೆಚ್ಚಿನ ಮತಗಟ್ಟೆಗಳನ್ನು ಅಲಂಕರಿಸಿದ ಕೀರ್ತಿಯನ್ನು ಜಿಲ್ಲೆಗೆ ತಂದಿದ್ದಾರಲ್ಲದೆ, ಶೌಚಾಲಯವೇ ಇಲ್ಲದ ಪಾವಗಡ ವಿಧಾನಸಭಾ ಕ್ಷೇತ್ರದ 9 ಮತಗಟ್ಟೆಗಳಲ್ಲಿ 15 ದಿನಗಳೊಳಗೆ ಶೌಚಾಲಯ ನಿರ್ಮಾಣ ಕಾರ್ಯ ಕೈಗೊಂಡ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ವೀಕ್ಷಕರ ಲೈಸನಿಂಗ್ ಅಧಿಕಾರಿಗಳ ಕಾರ್ಯ ನಿರ್ವಹಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಒಟ್ಟಾರೆಯಾಗಿ ಚುನಾವಣಾ ಕರ್ತವ್ಯ ನಿರ್ವಹಿಸಿದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ ಸಾರ್ಥಕ್ಯ ಭಾವನೆ ಮೂಡಿದೆ ಎಂದು ಭಾವಿಸುತ್ತೇನೆ ಎಂದು ತಿಳಿಸಿದರು.
ಎತ್ತಿನ ಹೊಳೆ ಯೋಜನೆ ಭೂಸ್ವಾಧೀನಾಧಿಕಾರಿ ಹಾಗೂ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಮಂಜುನಾಥ ಮಾತನಾಡಿ, ಚುನಾವಣಾ ಘೋಷಣೆಯಾಗುವ ಮುನ್ನವೇ ಕಾಲಕಾಲಕ್ಕೆ ನಿರ್ವಹಿಸಬೇಕಾದ ಕರ್ತವ್ಯಗಳನ್ನು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಜಿಲ್ಲಾಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಿದ್ದರಿಂದಲೇ ಗೊಂದಲವಿಲ್ಲದೆ ಸ್ಪಷ್ಟತೆಯಿಂದ ಚುನಾವಣಾ ಕರ್ತವ್ಯ ನಿರ್ವಹಿಸಲು ಸಾಧ್ಯವಾಯಿತು. ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಜರುಗಿದ ವಿವಿಧ ಸ್ವೀಪ್ ಚಟುವಟಿಕೆಗಳಿಂದ ಕಳೆದ ಬಾರಿಗಿಂತ ಈ ಬಾರಿ ಮತದಾನ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ. ಗೊಂದಲದ ವಾತಾವರಣ ಉಲ್ಬಣವಾಗದಂತೆ ಶಾಂತಿಯುತ ಚುನಾವಣೆಗೆ ಪೊಲೀಸ್ ಇಲಾಖೆಯ ಸಹಕಾರ ಸ್ಮರಣೀಯವಾದುದು. ಒಟ್ಟಾರೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಮೂರು ಅಧಿಕಾರಿಗಳ ತಂಡದ ನೇತೃತ್ವದಲ್ಲಿ ಜಿಲ್ಲೆಯ ಚುನಾವಣೆ ಮಾದರಿಯಾಗಲು ಸಾಧ್ಯವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಭೆಯಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ, ವಿವಿಧ ನೋಡಲ್ ಅಧಿಕಾರಿ, ಅಧಿಕಾರಿ/ಸಿಬ್ಬಂದಿಗಳು ಹಾಜರಿದ್ದರು.