ಮಂಡ್ಯ | ನಾನು ಬಡತನ ರೇಖೆಗಿಂತ ಕೆಳಗಿಲ್ಲ. ಹೀಗಾಗಿ ಅನ್ನಭಾಗ್ಯ (Annabhagya) ನನಗೆ ಸಿಗಬಾರದು. ನನ್ನಂಥವರಿಗೆ ಅನ್ನಭಾಗ್ಯ ಸಿಗಬಾರದು ಎನ್ನುವ ಉದ್ದೇಶಕ್ಕಷ್ಟೆ ಅನರ್ಹರ ಬಿಪಿಎಲ್ ಕಾರ್ಡ್ ಎಪಿಎಲ್ ಗೆ ಬದಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ಮಾತನಾಡಿದ ಅವರು, GDP ಯಲ್ಲಿ ಇಡೀ ದೇಶದಲ್ಲಿ ನಾವೇ ನಂಬರ್ ಒನ್. ಇದಕ್ಕೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ. ರೈತರ ಶ್ರಮಕ್ಕೆ ತಕ್ಕ ಫಲ ಸಿಗಬೇಕು. ನಮ್ಮ ಉತ್ಪಾದನೆಗೆ ನಾವೇ ಬೆಲೆ ನಿಗಧಿ ಮಾಡುವಂತಾಗಬೇಕು. ಕೈಗಾರಿಕೋದ್ಯಮಿಗಳು ಅವರು ತಯಾರಿಸಿದ ವಸ್ತುಗೆ ಅವರೇ ಬೆಲೆ ನಿಗಧಿ ಮಾಡ್ತಾರೆ. ಇದೇ ಅಧಿಕಾರ ನಮ್ಮ ರೈತರಿಗೂ ಸಿಗಬೇಕು.
ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಒಕ್ಕೂಟ ವ್ಯವಸ್ಥೆ ಯಶಸ್ವಿ ಆಗಬೇಕಾದರೆ ದೇಶದ 140 ಕೋಟಿ ಜನರಿಗೂ ಸಕಲ ಸಹಕಾರ ಕೊಡಬೇಕು. ನಮ್ಮ ರೈತ ಸಮುದಾಯಕ್ಕೆ ಬೆಲೆ ಫಿಕ್ಸ್ ಮಾಡುವ ಅಧಿಕಾರ ಬರಬೇಕು. ಆಗ ತಾರತಮ್ಯ ನಿವಾರಣೆ ಆಗುತ್ತದೆ ಎಂದರು.
ಈ ದೇಶಕ್ಕೆ ಸಿಕ್ಕ ರಾಜಕೀಯ ಸ್ವಾತಂತ್ರ್ಯ ಯಶಸ್ವಿ ಆಗಬೇಕಾದರೆ, ಪ್ರತಿಯೊಬ್ಬರಿಗೂ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಸಿಗಬೇಕು ಎನ್ನುವ ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖಿಸಿ ಈ ಕಾರಣಕ್ಕೇ ನಾವು ಅನ್ನ ಭಾಗ್ಯ ಮತ್ತು ಆರ್ಥಿಕ ಶಕ್ತಿ ಕೊಡುವ ಐದೈದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ ಎಂದರು.
ಬಡ ಕುಟುಂಬದವರ ಮತ್ತು ನಮ್ಮ ಹೆಣ್ಣು ಮಕ್ಕಳ ಹಣ ಉಳಿತಾಯ ಆಗಲಿ ಎನ್ನುವ ಕಾರಣದಿಂದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಯೋಜನೆಗಳನ್ನು ನಮ್ಮ ಜನರ ಮನೆ ಬಾಗಿಲಿಗೆ ತಲುಪಿಸಿದ್ದೇವೆ. ಕೈಯಲ್ಲಿ ಕಾಸಿದ್ದರೆ ತಾನೆ ನಮ್ಮ ಜನ ಖರೀದಿಗೆ ಹೋಗೋದು. ಅದಕ್ಕೇ ಜನರ ಕೈಯಲ್ಲಿ ಕಾಸು ಇರುವ ಯೋಜನೆ ಜಾರಿ ಮಾಡಿದ್ದೇವೆ ಎಂದು ಹೇಳಿದರು.