ಮಹಾರಾಷ್ಟ್ರ | ಬಾಲಿವುಡ್ ನಟ ಸೈಫ್ ಅಲಿ ಖಾನ್ (Actor Saif Ali Khan) ಮೇಲೆ ಚಾಕು ದಾಳಿ ನಡೆದಿದ್ದು, ದೇಹದ ಆರು ಕಡೆಗಳಲ್ಲಿ ಗಾಯಗಳಾಗಿವೆ. ಶ್ರೀಮಂತ ನಟ ಎಂಬ ಕಾರಣಕ್ಕೆ ಕಳ್ಳರು ಅವರ ಮನೆಗೆ ನುಗ್ಗಿದ್ದು, ಕನ್ನ ಹಾಕಲು ಪ್ರಯತ್ನಿಸಿದ್ದರು. ಈ ಸಂದರ್ಭ ಸೈಫ್ ಅವರು ತಡೆಯಲು ಹೋಗಿ ಕಳ್ಳರಿಂದ ಹಲ್ಲೆಗೆ ಒಳಗಾದರು. ಸದ್ಯ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಷ್ಟಕ್ಕೂ ಆಗಿದ್ದೇನು..?
ಸೈಫ್ ಅಲಿ ಖಾನ್ (Actor Saif Ali Khan) ಮುಂಬೈನ ಬಾಂದ್ರಾದ ತಮ್ಮ ಮನೆಯಲ್ಲಿ ಕುಟುಂಬದ ಜೊತೆ ಮಲಗಿದ್ದು, ಇಂದು ಮುಂಜಾನೆ 2.30ರ ವೇಳೆಗೆ ಈ ಘಟನೆ ನಡೆದಿದೆ. ಕಳ್ಳರು ಮನೆಯ ಒಳಗೆ ನುಗ್ಗಿದ್ದಾಗ ಎಲ್ಲರಿಗೂ ಎಚ್ಚರವಾಗಿದ್ದು, ಸೈಫ್ ಅವರು ಅವರನ್ನು ತಡೆಯಲು ಮುಂದಾದರು. ಈ ಸಂದರ್ಭ ಕಳ್ಳರು ಚಾಕುವಿನಿಂದ ಹಲ್ಲೆ ಮಾಡಿದ್ದು, ಗಾಯಗೊಂಡ ಸೈಫ್ ಸ್ಥಳದಲ್ಲಿಯೇ ಕುಸಿದು ಬಿದ್ದರು. ಕಳ್ಳರು ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾರೆ.
ಪೊಲೀಸರು ಹೇಳಿದ್ದೇನು..?
ಈ ಘಟನೆಯ ಕುರಿತು ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಕಳ್ಳರನ್ನು ಹಿಡಿಯಲು ವಿಶೇಷ ಪೊಲೀಸರು ಮತ್ತು ಮುಂಬೈ ಕ್ರೈಮ್ ಬ್ರಾಂಚ್ ತಂಡವನ್ನು ರಚಿಸಲಾಗಿದೆ. ಮನೆ ಮತ್ತು ಸುತ್ತಮುತ್ತಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.
ಪೊಲೀಸರ ಪ್ರಕಾರ, ಕಳ್ಳರು 2-3 ಬಾರಿ ಚಾಕುವಿನಿಂದ ದಾಳಿ ಮಾಡಿದ್ದಾರೆ. ಸೈಫ್ ಅವರಿಗೆ ಬೆನ್ನಿನ ಭಾಗದಲ್ಲಿ ಗಂಭೀರ ಗಾಯಗಳು ಆಗಿದ್ದು, ಬೆನ್ನಿನ ಮೂಳೆಗೆ ತೊಂದರೆ ಉಂಟಾಗಿದೆ ಎಂಬ ಬಗ್ಗೆ ಪರೀಕ್ಷೆ ನಡೆಯುತ್ತಿದೆ. ಆರು ಕಡೆಗಳಲ್ಲಿ ಗಾಯಗಳಾಗಿದ್ದು, ಇಬ್ಬು ಜಾಗಗಳಲ್ಲಿ ಗಾಯಗಳು ಗಂಭೀರವಾಗಿವೆ.
ಸೈಫ್ ಅಲಿ ಖಾನ್ ಗೆ (Actor Saif Ali Khan) ವೈದ್ಯಕೀಯ ಚಿಕಿತ್ಸೆ
ಸೈಫ್ ಅಲಿ ಖಾನ್ ಅವರನ್ನು ತಕ್ಷಣ ಲೀಲಾವತಿ ಆಸ್ಪತ್ರೆಗೆ ಕರೆತರಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಬೆನ್ನಿನ ಭಾಗದ ದೊಡ್ಡ ಗಾಯದ ಕಾರಣದಿಂದ ದೀರ್ಘಕಾಲದ ಚಿಕಿತ್ಸೆ ಅಗತ್ಯವಿರಬಹುದೆಂದು ಅಭಿಪ್ರಾಯ ವ್ಯಕ್ತವಾಗಿದೆ.
ಆರೋಪಿಗಳನ್ನು ಹಿಡಿಯಲು ಕ್ರಮ
ಘಟನೆಯ ಬಳಿಕ, ಪೊಲೀಸರು ಕಳ್ಳರನ್ನು ಪತ್ತೆಹಚ್ಚಲು ಶ್ರಮಿಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ತೀವ್ರಗೊಳಿಸಲಾಗಿದೆ. ಈ ಘಟನೆ ಬಾಲಿವುಡ್ ವಲಯದಲ್ಲಿ ಆಘಾತ ಉಂಟುಮಾಡಿದ್ದು, ಅಭಿಮಾನಿಗಳು ಸೈಫ್ ಅವರ ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತಿದ್ದಾರೆ.