ದಕ್ಷಿಣ ಕನ್ನಡ | ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಈ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಕೂಡ ತನ್ನದೇ ಆದಂತಹ ತಂತ್ರಗಾರಿಕೆಯನ್ನು ಮಾಡುತ್ತಿವೆ. ಇದರಿಂದಾಗಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಜೆಡಿಎಸ್ ಪಕ್ಷ ಕೂಡ ಹೊರತಾಗಿಲ್ಲ.
ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಎಚ್ ಡಿ ಕುಮಾರಸ್ವಾಮಿ ಶತಾಯಗತಾಯ ತಯಾರಿ ನಡೆಸಿದ್ದಾರೆ. ಆದರೆ ದಕ್ಷಿಣ ಕನ್ನಡದ ಉಳ್ಳಾಲ ಜೆಡಿಎಸ್ ಅಭ್ಯರ್ಥಿ ಹೇಳದೆ ಕೇಳದೆ ನಾಮಪತ್ರ ಹಿಂಪಡೆದು ಎಚ್ ಡಿ ಕುಮಾರಸ್ವಾಮಿ ಅವರಿಗೆ ಶಾಕ್ ನೀಡಿದ್ದಾರೆ.
ಉಳ್ಳಾಲ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕುಂಪಲ ನಾಮಪತ್ರ ಹಿಂಪಡೆದಿದ್ದು, ಇದೀಗ ನಾಪತ್ತೆಯಾಗಿದ್ದಾರೆಂದು ಪಕ್ಷದ ಮುಖಂಡರು ಆರೋಪಿಸಿದ್ದಾರೆ. ಅಲ್ತಾಫ್ ಪರಿಷತ್ ಸದಸ್ಯ ಬಿಎಂ ಫಾರೂಕ್ ಅವರ ಮನವೊಲಿಸಿ ಬಿ ಫಾರಂ ಪಡೆದು ಜೆಡಿಎಸ್ ಕೌನ್ಸಿಲರ್ ಹಾಗೂ ಜಿಲ್ಲಾ ಮುಖಂಡರೊಂದಿಗೆ ನಾವು ಪತ್ರ ಸಲ್ಲಿಸಿದರು. ಏಪ್ರಿಲ್ 24 ರಂದು ಪಕ್ಷದ ಮುಖಂಡರೊಂದಿಗೆ ಚರ್ಚಿಸದೆ ನಾಮಪತ್ರ ವಾಪಸ್ ಪಡೆದು ನಾಪತ್ತೆಯಾಗಿದ್ದಾರೆ. ಎರಡು ದಿನದಿಂದ ಮೊಬೈಲ್ ಸ್ವಿಚ್ ಆಫ್ ಬರುತ್ತಿದ್ದು ಅವರು ಎಲ್ಲಿದ್ದಾರೆ ಎಂದು ತಿಳಿದುಬಂದಿಲ್ಲ.
ಮಂಗಳೂರು ಕ್ಷೇತ್ರದಲ್ಲಿ ಜಾತ್ಯಾತೀತ ಮತ ವಿಭಜನೆ ತಪ್ಪಿಸುವ ಉದ್ದೇಶದಿಂದ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕುಂಪಲ ಸ್ವಯಂ ಪ್ರೇರಿತರಾಗಿ ನಾಮಪತ್ರ ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ. ಸುನ್ನಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಅಲ್ತಾಫ್ ಕುಂಪಲ ಅವರು ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕಾರಣ ಅವರನ್ನು ಸಂಘಟನೆಯಿಂದ ವಜಾ ಮಾಡಲಾಗಿತ್ತು. ನಾಮಪತ್ರ ವಾಪಸ್ ಪಡೆಯುವಂತೆ ಸಮುದಾಯದ ಸಂಘಟನೆಗಳಿಂದ ಭಾರೀ ಒತ್ತಡ ಬಂದಿದ್ದು, ಆ ಕಾರಣಕ್ಕೆ ಕಣದಿಂದ ಹಿಂದೆ ಸರಿದಿರಬಹುದು ಎನ್ನಲಾಗಿದೆ.