ತುಮಕೂರು | ರಾಜ್ಯದ ಶಿಕ್ಷಣ ಇಲಾಖೆಯಲ್ಲಿ 8000 ಶಾಲಾ ಕೊಠಡಿ ನಿರ್ಮಾಣ, 17000 ಶಿಕ್ಷಕರ ನೇಮಕ ಯಾವುದೇ ಹಗರಣ ಮಾಡದೇ ನೇಮಕ ಮಾಡಲಾಗಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅರ್ಜಿ ಹಾಕದವರಿಗೂ ಶಿಕ್ಷಕರ ನೇಮಕ ಮಾಡಿ ಭ್ರಷ್ಟಾಚಾರ ಮಾಡಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ತುಮಕೂರು ಜಿಲ್ಲೆಯ ತಿಪಟೂರು ಬಿಜೆಪಿ ಅಭ್ಯರ್ಥಿ ಬಿಸಿ ನಾಗೇಶ್ ಪರ ಕೆಬಿ ಕ್ರಾಸ್ ಬಳಿ ರೋಡ್ ಶೋ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಅವಧಿಯಲ್ಲಿ ಎಸ್ಸಿ ಎಸ್ಟಿ ವಿದ್ಯಾರ್ಥಿಗಳ ಹಾಸಿಗೆ ದಿಂಬಿನಲ್ಲಿಯೂ ಲಂಚಾವತಾರ ಮಾಡಿದರು. ಪೊಲಿಸ್ ನೇಮಕಾತಿಯಲ್ಲಿಯೂ ಹಗರಣ ಮಾಡಿದರು ಎಂದು ಹೇಳಿದರು.
ತುಮಕೂರು ಜಿಲ್ಲೆ ತಿಪಟೂರು ಕಲ್ಪವೃಕ್ಷದ ನಾಡು ಇಲ್ಲಿನ ಜನರು ಒಳ್ಳೆಯದನ್ನು ಬೆಂಬಲಿಸುತ್ತಿರಿ. ಬಿ.ಸಿ. ನಾಗೇಶ್ ತಿಪಟೂರು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಈ ಭಾಗದಲ್ಲಿ ಹೊನ್ನಳ್ಳಿ ಏತ ನೀರಾವರಿ ಯೋಜನೆಯನ್ನು ಜಾರಿಗೆ ತಂದು ಕಟ್ಟ ಕಡೆಯ ಕೆರೆ ತುಂಬಿಸುವ ಕೆಲಸ ಮಾಡಿದ್ದಾರೆ ಎಂದರು.
ಯಡಿಯೂರಪ್ಪ ಅವರು ಸಿಎಂ ಆದಾಗ ಭಾಗ್ಯ ಲಕ್ಷ್ಮಿ ಯೊಜನೆ ಜಾರಿಗೆ ತಂದಿದ್ದಾರೆ. ಇದರಿಂದ ಶೇ 30 ರಷ್ಟು ಅಲ್ಪ ಸಂಖ್ಯಾತ ಮಹಿಳೆಯರಿಗೆ ಅನುಕುಲವಾಗಿದೆ. ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಗೆ ಯಡಿಯೂರಪ್ಪ ಅವರು 4000 ರೂ. ಸೇರಿಸಿ ಕೊಡುವ ಕೆಲಸ ಮಾಡಿದ್ದಾರೆ. ರೈತ ವಿದ್ಯಾನಿಧಿ, ಎಸ್ಸಿ ಎಸ್ಟಿ ಸಮುದಾಯಕ್ಕೆ 75 ಯುನಿಟ್ ಉಚಿತ ವಿದ್ಯುತ್ , ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಯೋಜನೆಯನ್ನು ನಾವು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.
ಬಿ ಸಿ ನಾಗೇಶ್ ಅವರನ್ನು 25 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ಲಿಸಿಕೊಂಡು ಬರಬೇಕು. ಹೇಮಾವತಿ ನೀರು ತರುವ ಕೆಲಸ ಮಾಡಿದ್ದಾರೆ. ಅವರು ಸಾಕಷ್ಟು ಅನುದಾನ ತಂದಿದ್ದಾರೆ. ಅವರನ್ನು ಗೆಲ್ಲಿಸಿ ರಾಜ್ಯದಲ್ಲಿ ಮತ್ತೆ ಕಮಲ ಅರಳಿಸಿ ಎಂದು ಹೇಳಿದರು.
ಮನೆಮನೆಗೆ ನಲ್ಲಿ ನೀರು
ನಂತರ ತಿಪಟೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ತುಮಕೂರು ಭಾಗದಲ್ಲಿ ಗೊಳುರು, ಹೊನ್ನಳ್ಳಿ ಏತ ನೀರಾವರಿ ಮಾಡಿದ್ದರಿಂದ ಪ್ರತಿ ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆ ಅಡಿ ಮನೆ ಮನೆಗಳಿಗೆ ನೀರು ಕೊಡಲಾಗುತ್ತಿದೆ.
70 ವರ್ಷದಲ್ಲಿ ರಾಜ್ಯದಲ್ಲಿ 25 ಲಕ್ಷ ಮನೆಗಳಿಗೆ ನಲ್ಲಿ ನೀರು ಕೊಡಲಾಗಿತ್ತು. ನಾವು ಬಂದು 40 ಲಕ್ಷ ಮನೆಗಳಿಗೆ ನಲ್ಲಿ ನೀರು ಕೊಡುವ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಇದ್ದಿದ್ದರೆ, ಈ ಕೆಲಸ ಆಗುತ್ತಿತ್ತಾ ? ಈ ಭಾಗದ ರಸ್ತೆಗಳು ಅಭಿವೃದ್ಧಿ ಆಗುತ್ತಿತ್ತಾ ಎಂದು ಪ್ರಶ್ನಿಸಿದರು.
ದುಡಿಯುವ ಸಮುದಾಯಗಳಿಗೆ ಕಾಯಕ ಯೊಜನೆ, ರೈತರು, ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೊಳಿಸಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ನಿಂದ ಗಳಗಂಟಿ
ಕಾಂಗ್ರೆಸ್ ನವರು 10 ಕೆಜಿ ಅಕ್ಕಿ ಕೊಡುತ್ತೇನೆ ಎನ್ನುತ್ತಾರೆ. ಹೆಣ್ಣು ಮಕ್ಕಳಿಗೆ 2000 ರೂ. ಕೊಡುವುದಾಗಿ ಹೇಳುತ್ತಾರೆ. 200 ಯುನಿಟ್ ಉಚಿತ ವಿದ್ಯುತ್ ನೀಡುತ್ತೇನೆ ಎಂದು ಗ್ಯಾರೆಂಟಿ ಕೊಡುತ್ತಿದ್ದಾರೆ ಅದರ ಮೇಲೆ ನಂಬಿಕೆ ಇದಿಯಾ ?
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದವರು, ಒಂದು ಸಮುದಾಯ ಭ್ರಷ್ಟಾಚಾರದಲ್ಲಿ ತೊಡಗಿದೆ ಅಂತ ನೇರವಾಗಿ ಆರೋಪ ಮಾಡಿದ್ದಾರೆ. ಎಷ್ಟೇ ಸಣ್ಣ ಸಮುದಾಯಗಳಿಗೂ ಗೌರವ ಕೊಡಬೇಕು. ಸಿದ್ದರಾಮಯ್ಯ ಸಾರ್ವಜನಿಕ ಜೀವನದಲ್ಲಿ ಇರಬೇಕಾ ?
ಮೊದಲು ಲಿಂಗಾಯತ ಸಮುದಾಯದವರೆಲ್ಲ ಅಂತ ಹೇಳಿದರು. ಮತ್ತೆ ಸಮಜಾಯಿಸಿ ನೀಡಿ ನನ್ನ ಮೇಲೆ ಆರೋಪ ಮಾಡಿದರು. ಸಿದ್ದರಾಮಯ್ಯ ಅವರೇ ನಿಮ್ಮ ಅವಧಿಯಲ್ಲಿ ಬಿಡಿಎ ನಲ್ಲಿ 8000 ಕೋಟಿ ರೂ. ಹಗರಣ ಮಾಡಿದ್ದರು.
ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ಮೇಲೆ ಆರೊಪ ಮಾಡಿದರು. ನಾಗೇಶ್ ಮೇಲೆ ಮಾಡಿರುವ ಆರೋಪ ದೇವರ ಮೇಲೆ ಆರೋಪ ಮಾಡಿದಂತೆ. ಅವರ ಕಾಲದಲ್ಲಿ ನಡೆದ ಶಿಕ್ಷಕರ ಹಗರಣ ತನಿಖೆ ನಡೆಸಿದಾಗ 72 ಜನರನ್ನು ತೆಗೆದು ಹಾಕಲಾಯಿತು ಎಂದು ಹೇಳಿದರು.