ಹಾವೇರಿ | (ಹಾನಗಲ್ ) ಸಹಕಾರಿ ಸಂಸ್ಥೆಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡಿದಾಗ ಮಾತ್ರ ಆರ್ಥಿಕ ಪ್ರಗತಿ ನಿರೀಕ್ಷಿಸಬಹುದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ಹಾನಗಲ್ ತಾಲೂಕಿನ ದಿ. ಅಕ್ಕಿಆಲೂರು ಅರ್ಬನ್ ಬ್ಯಾಂಕಿನ ಶತಮಾನೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಸಹಕಾರಿಗಳು ಸರಕಾರ ಆಳುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ಸರಕಾರ ಸಹಕಾರ ಕ್ಷೇತ್ರವನ್ನು ಆಳುತ್ತಿದೆ. ಇದು ತಪ್ಪಿದಾಗ ಮಾತ್ರ ಆರ್ಥಿಕ ಬೆಳವಣಿಗೆ ಸಾಧ್ಯವಿದೆ. ಕೇಂದ್ರ ಸರಕಾರ ಪ್ರತ್ಯೇಕವಾಗಿ ಸಹಕಾರ ಇಲಾಖೆ ಮಾಡಿ ಹೊಸ ಸ್ವರೂಪ ನೀಡಿದೆ. ಪ್ರತಿ ಗ್ರಾಮಗಳಲ್ಲಿ ಸಹ ವಿವಿಧೋದ್ದೇಶ ಸಂಸ್ಥೆಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ನಿಂದಲೇ ವಿದ್ಯುತ್ ದರ ಹೆಚ್ಚಳದ ಆಜ್ಞೆ – ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿ – karnataka360.in
ಸಮಸ್ಯೆ, ಸವಾಲುಗಳ ಮಧ್ಯೆಯೂ ಅಕ್ಕಿ ಅಲೂರು ಅರ್ಬನ್ ಬ್ಯಾಂಕು ನೂರು ವರ್ಷ ಆಚರಿಸಿಕೊಳ್ಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಕಾನೂನು ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ನಿಯಮಾವಳಿಯಲ್ಲಿನ ತೊಡಕುಗಳಿಂದಾಗಿ ಸಹಕಾರಿ ವಲಯದ ಬ್ಯಾಂಕುಗಳು ಸಂಕಷ್ಟಕ್ಕೆ ಸಿಲುಕಿವೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಮೂಲಕ ಸಹಕಾರಿ ವಲಯ ಉಳಿಸಿಕೊಳ್ಳುವ ಪ್ರಯತ್ನ ಸರಕಾರದಿಂದ ನಡೆದಿದೆ ಎಂದು ಹೇಳಿದರು.
ಆರ್ಥಿಕ ಶಿಸ್ತು ಕಾಪಾಡಿಕೊಂಡಾಗ ಮಾತ್ರ ಸಹಕಾರಿ ವಲಯದ ಸಂಘ, ಸಂಸ್ಥೆಗಳು ಉಳಿಯಲಿವೆ. ಸೊಸೈಟಿಯಾಗಿ ಸ್ಥಾಪಿಸಲ್ಪಟ್ಟು ಆರ್‌ಬಿಐ ಲೈಸನ್ಸ್ ಪಡೆದು ಗ್ರಾಹಕರ ವಿಶ್ವಾಸದೊಂದಿಗೆ ಬ್ಯಾಂಕು ನೂರು ವರ್ಷದ ಸಂಭ್ರಮದಲ್ಲಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಹುಬ್ಬಳ್ಳಿಯ ಮೂರುಸಾವಿರ ಮಠದ ಡಾ.ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ, ಸ್ಥಳೀಯ ವಿರಕ್ತಮಠದ ಶಿವಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಲಮಾಣಿ ಸಾರ್ಥಕ ಶತಕ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಶಾಸಕ ಶ್ರೀನಿವಾಸ ಮಾನೆ, ಆರ್‌ಬಿಐ ಜನರಲ್ ಮ್ಯಾನೇಜರ್ ಮೀನಾಕ್ಷಿ ಗಡ, ಬ್ಯಾಂಕಿನ ಅಧ್ಯಕ್ಷ ಷಣ್ಮುಖಪ್ಪ ಮುಚ್ಚಂಡಿ, ಉಪಾಧ್ಯಕ್ಷ ಸಿದ್ದರಾಮಪ್ಪ ವಿರುಪಣ್ಣನವರ, ಸಾಹಿತಿ ಸತೀಶ ಕುಲಕಣ ð, ರಾಜಶೇಖರ ಮೆಣಸಿನಕಾಯಿ ಸೇರಿದಂತೆ ಇತರರಿದ್ದರು.