ತುಮಕೂರು | ಪಶು ಪಾಲಕರಿಗೆ, ರೈತರಿಗೆ ಅನುಕೂಲ ಆಗಲಿ ಎನ್ನುವ ಕಾರಣದಿಂದ ಪ್ರತಿ ಲೀಟರ್ ಹಾಲಿನ ದರವನ್ನು 3 ರೂ ಹೆಚ್ಚಳ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನಲ್ಲಿ ಕ್ಷೀರ ಭಾಗ್ಯ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು.
ಇದೆ ವೇಳೆ ಮಾತನಾಡಿ, ಶಾಲಾ ಮಕ್ಕಳಿಗೆ ಶೂ ಭಾಗ್ಯ ಕಾರ್ಯಕ್ರಮ ಘೋಷಣೆ ಮಾಡಿದ್ದು ಮಧುಗಿರಿಯಲ್ಲೇ, ಹೈಸ್ಕೂಲಿಗೆ ಹೋಗುವವರೆಗೂ ನನ್ನ ಕಾಲಲ್ಲಿ ಚಪ್ಪಲಿ ಇರಲಿಲ್ಲ. ನನ್ನ ಪರಿಸ್ಥಿತಿ ಉಳಿದ ಮಕ್ಕಳಿಗೆ ಬರಬಾರದು ಎನ್ನುವ ಕಾರಣದಿಂದ ಶೂ ಭಾಗ್ಯ ಜಾರಿಗೊಳಿಸಿದೆ ಎಂದರು.
ಎತ್ತಿನಹೊಳೆ ಯೋಜನೆಗೆ ಸಮರ್ಪಕವಾಗಿ ಹಣ ಕೊಡದೆ ಬಿಜೆಪಿ ಜಿಲ್ಲೆಯ ಜನತೆಗೆ ವಂಚಿಸಿತು. ತುಂಗಾ ಮೇಲ್ದಂಡೆ ಯೋಜನೆಗೆ ಹಿಂದಿನ ಬಿಜೆಪಿ ಸರ್ಕಾರ ನೆರವು ನೀಡಲಿಲ್ಲ. ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು ಎನ್ನುವ ನಮ್ಮ ಬೇಡಿಕೆಗೆ ಕೇಂದ್ರ ಸರ್ಕಾರ ಒಪ್ಪುತ್ತಿಲ್ಲ ಎಂದರು.
ಇನ್ನೂ ಮಧುಗಿರಿಯನ್ನು ಜಿಲ್ಲೆ ಮಾಡಬೇಕು ಎನ್ನುವುದು ಬಹುದಿನಗಳ ಬೇಡಿಕೆ ಇದೆ. ಹೀಗಾಗಿ ಕೆ.ಎನ್.ರಾಜಣ್ಣ ಅವರ ಬೇಡಿಕೆಯನ್ನು ನಾನು ಖಂಡಿತ ಪರಿಶೀಲಿಸುತ್ತೇನೆ. ಮಧುಗಿರಿಯಲ್ಲಿರುವ ಏಷ್ಯಾ ಖಂಡದಲ್ಲೇ ಪ್ರಸಿದ್ದವಾಗಿರುವ ಏಕಶಿಲೆ ಬೆಟ್ಟಕ್ಕೆ ರೋಪ್ ವೇ ಹಾಕಿಸುತ್ತೇವೆ ಎಂದು ಭರವಸೆ ನೀಡುತ್ತಿದ್ದೇನೆ ಎಂದರು.
ಕೆ.ಎನ್.ರಾಜಣ್ಣ ಅವರನ್ನು ರಾಜಕೀಯವಾಗಿ ಕಳೆದುಕೊಂಡರೆ ಅದು ಮಧುಗಿರಿಯ ಜನತೆಗೆ ಬಹಳ ದೊಡ್ಡ ಲಾಸ್ ಆಗುತ್ತದೆ. ರಾಜಣ್ಣ ಬಡವರ ಪರವಾಗಿ ಸಿಕ್ಕಾಪಟ್ಟೆ ಕೆಲಸ ಮಾಡಿದ್ದಾರೆ ಎಂದು ಹೇಳಿದರು.