ಹಾವೇರಿ | ಜಿಲ್ಲೆಯ ಶಿಗ್ಗಾಂವಿ ವಿಧಾನಸಭೆ ಚುನಾವಣೆಗೆ ಮುಖ್ಯಮಂತ್ರಿ ಬಸವರಾಜ್ ಬೋಮ್ಮಾಯಿಯವರು ನಾಮ ಪತ್ರ ಸಲ್ಲಿಸಿದ್ದಾರೆ. ಆ ನಾಮಪತ್ರ ಕೇವಲ ಶಾಸಕ ಸ್ಥಾನಕ್ಕೆ ಮಾತ್ರವಲ್ಲ, ಕರ್ನಾಟಕವನ್ನು ಹೊಸ ದಿಕ್ಕಿಗೆ ಒಯ್ಯುವ ಮಾರ್ಗವಾಗಲಿದೆ. ನಿಮ್ಮಲ್ಲಿರುವ ಆತ್ಮ ವಿಶ್ವಾಸ, ಉತ್ಸಾಹ ನೋಡಿದರೇ ಬೊಮ್ಮಾಯಿ ಅವರಿಗೆ ಮುಂದಿನ ಐದು ವರ್ಷಗಳ ಕಾಲ ಮತ್ತೆ ಅವಕಾಶ ಸಿಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.
ಶಿಗ್ಗಾಂವಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಬೃಹತ್ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು,
ಬೊಮ್ಮಾಯಿಯವರ ಮಾತು ಕೇಳಿದೆ. ಅವರು ಬಡವರಿಗೆ 12 ಸಾವಿರ ಮನೆ ನಿರ್ಮಾಣ ಹಾಗೂ ಸಾಕಷ್ಟು ಅಭಿವೃದ್ಧಿ ಮಾಡಿರುವುದಾಗಿ ಹೇಳಿದರು. ಸುದೀಪ್ ಅವರು ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯ ಮೆಚ್ಚಿರುವುದಾಗಿ ಹೇಳಿದರು. ಅಲ್ಲದೇ ಬೊಮ್ಮಾಯಿ ಅವರಿಗೆ ಕಡಿಮೆ ಸಮಯ ಸಿಕ್ಕಿದೆ ಇನ್ನಷ್ಟು ಸಮಯ ಬೇಕಿದೆ ಎಂದೂ ಬಯಕೆ ವ್ಯಕ್ತಪಡಿಸಿದರು. ನಾನು ಕೇವಲ ಬೊಮ್ಮಾಯಿ ಪರವಾಗಿ ಮತಕೇಳಲು ಬಂದಿಲ್ಲ. ಕರ್ನಾಟಕದಲ್ಲಿ ವಿಕಾಸದ ಗಂಗಾ ಹರಿಸಲು ಕಮಲಕ್ಕೆ ನಿಮ್ಮ ಮತ ಕೇಳಲು ಬಂದಿದ್ದೇನೆ ಎಂದು ಜೆ.ಪಿ. ನಡ್ಡಾ ಹೇಳಿದರು.
ಕಾಂಗ್ರೆಸ್ ಅಂದ್ರೆ ಕಮಿಷನ್, ಕರಪ್ಷನ್
ಕಾಂಗ್ರೆಸ್ ಅಂದ್ರೆ ಕರಪ್ಷನ್, ಕಮಿಷನ್, ಕ್ರಿಮಿನಲೈಸೇಷನ್. ಕಾಂಗ್ರೆಸ್ ನಾಯಕರು ನಾಯಕರಲ್ಲ. ಅವರು ಎಟಿಎಂ ಮಷಿನ್ ನಡೆಸೋ ಜನರು. ಎಟಿಎಂ ಅಂದರೆ ಆಟೋಮ್ಯಾಟಿಕ್ ಟ್ರಾನ್ಸಫರ್ ಆಫ್ ಮನಿ. ಕಾಂಗ್ರೆಸ್ ಅವರನ್ನು ಇಲ್ಲಿ ಕೂರಿಸಿದರೆ ಮೋದಿ ಅವರು ರಾಜ್ಯಕ್ಕೆ ಕಳಿಸಿದ ಹಣವನ್ನು ಇವರು ಡೆಲ್ಲಿ ಕಾಂಗ್ರೆಸ್ಗೆ ಕಳಿಸುತ್ತಾರೆ. ಇಂತಹ ಸರ್ಕಾರ ನಿಮಗೆ ಬೇಕಾ? ಮೋದಿ ಕಳಿಸೋ ಹಣ ರಾಜ್ಯದ ಅಭಿವೃದ್ಧಿಗೆ ಸದ್ಬಳಕೆ ಆಗಬೇಕು ಅಂದರೆ ನೀವು ಬಿಜೆಪಿಗೆ ಮತ ಹಾಕಿ ಎಂದು ಜೆ ಪಿ ನಡ್ಡಾ ಹೇಳಿದರು.
ಬಿಜೆಪಿ ಅಂದರೆ ಅಭಿವೃದ್ಧಿ
ರಾಜ್ಯದಲ್ಲಿ ಹೈವೇ ಗಳು ನಿರ್ಮಾಣ ಆಗ್ತಿದೆ. ತುಮಕೂರಿನಲ್ಲಿ ಹೆಲಿಕ್ಯಾಪ್ಟರ್, ಪ್ಲೇನ್ಗಳು ನಿರ್ಮಾಣ ಆಗ್ತಿದೆ. ರಾಜ್ಯದಲ್ಲಿ ವಂದೇ ಭಾರತ ರೈಲು ಓಡಾಡ್ತಿದೆ. ರೈಲುಗಳು ಇನ್ನೂ ಹೆಚ್ಚು ಓಡಾಡಬೇಕು ಅಂದರೆ ಬಿಜೆಪಿಗೆ ಮತ ನೀಡಿ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿ ಮನೆ, ಅಕ್ಕಿ ಪಡೆಯಲು ಕಮಲದ ಗುರುತಿಗೆ ಮತ ಹಾಕಿ. ಆಯುಷ್ಮಾನ ಭಾರತ ಯೋಜನೆಯಿಂದ ಬಡವರಿಗೆ ಅನಕೂಲ ಆಗುತ್ತಿದೆ. ಈ ಯೋಜನೆ ಮುಂದುವರೆಯಲು ಬಿಜೆಪಿ ಗುರುತಿಗೆ ಬಟನ್ ಒತ್ತಿ. ಎಫ್ ಡಿ ಐ ಮೂಲಕ ಕರ್ನಾಟಕಕ್ಕೆ ಅತಿ ಹೆಚ್ಚು ಬಂಡವಾಳ ಬರುತ್ತಿದೆ. ಇದು ಇನ್ನೂ ಹೆಚ್ಚಾಗಲು ಬೊಮ್ಮಾಯಿ ಕೈ ಬಲಪಡಿಸಲು ಬಿಜೆಪಿಗೆ ಮತ ಹಾಕಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಬಹಿರಂಗ ಸಭೆಯಲ್ಲಿ ಹೇಳಿದರು.
ರಾಜ್ಯದಲ್ಲಿ ಶಾಂತ ವಾತಾವರಣ
ಬಿಜೆಪಿ ಸರ್ಕಾರ ಪಿಎಫ್ಐ ಬ್ಯಾನ್ ಮಾಡಿದೆ. ಸಿದ್ದರಾಮಯ್ಯ ಪಿಎಫ್ಐ ಬ್ಯಾನ್ ಮಾಡಿದ್ದನ್ನು ಹಿಂಪಡೆಯುತ್ತೇವೆ ಎಂದು ಹೇಳುತ್ತಿದ್ದಾರೆ. ಪಿಎಫ್ಐ ಬ್ಯಾನ್ ಮುಂದುವರೆಯಬೇಕು ಅಂದರೆ ಕಮಲದ ಗುರುತಿಗೆ ಮತ ನೀಡಿ. ಬೊಮ್ಮಾಯಿ ಸರ್ಕಾರದಲ್ಲಿ ಅಪರಾಧ ಸಂಖ್ಯೆ ಕಡಿಮೆ ಆಗಿದೆ. ಇಂದು ರಾಜ್ಯದಲ್ಲಿನ ಅನೇಕ ಕ್ರಿಮಿನಲ್ಗಳು ಜೈಲಿನಲ್ಲಿದ್ದಾರೆ. ರಾಜ್ಯದಲ್ಲಿ ಶಾಂತಿ ಮತ್ತು ವಿಕಾಸಕ್ಕಾಗಿ ಕಮಲಕ್ಕೆ ಮತ ಹಾಕಬೇಕು. ಬೊಮ್ಮಾಯಿ ಅವರನ್ನು ನೀವು ಈಗಾಗಲೇ ಗೆಲ್ಲಿಸಿದ್ದೀರಿ. ರಾಜ್ಯದಲ್ಲಿ ಕಮಲವನ್ನು ಅರಳಿಸಲು ಮನೆಮನೆಗೆ ತೆರಳಿ ಪ್ರಚಾರ ಮಾಡಿ ಎಂದು ಜೆಪಿ ನಡ್ಡಾ ಜನರನ್ನು ಉದ್ದೇಶಿಸಿ ಹೇಳಿದರು.