ತುಮಕೂರು | ತುಮಕೂರು ಗ್ರಾಮಾಂತರ ಮಾಜಿ ಶಾಸಕ ಡಿ ಸಿ ಗೌರಿಶಂಕರ್ ರವರ ತಮ್ಮ ಚುನಾವಣೆಯನ್ನು ಅಸಿಂಧು ಗೊಳಿಸಿದ್ದ ಉಚ್ಛ ನ್ಯಾಯಾಲಯದ ಆದೇಶವನ್ನು ಪ್ರಶ್ನೆ ಮಾಡಿ ಸರ್ವೋಚ್ಛ ನಾಯ್ಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಜಸ್ಟಿಸ್ ಸೂರ್ಯಕಾಂತ್ ಮತ್ತು ಜೆ ಮಹೇಶ್ವರಿ ಇದ್ದ ನ್ಯಾಯಪೀಠ ಇಂದು ವಿಚಾರಣೆಗೆ ಕೈಗೆತ್ತುಕೊಂಡಿತ್ತು.
ಗೌರವಾನ್ವಿತ ಹೈಕೋರ್ಟ್ ನೀಡಿದ ಮಧ್ಯಂತರ ತಡೆಯಾಜ್ಞೆಯು 30.04.2023 ರಂದು ಮುಕ್ತಾಯಗೊಳ್ಳುತ್ತಿರುವುದರಿಂದ, ಡಿ ಸಿ ಗೌರಿಶಂಕರ್ ಚುನಾವಣೆಯನ್ನು ಅಸಿಂಧು ಎಂದು ಘೋಷಿಸಿ, ಕರ್ನಾಟಕ ಹೈಕೋರ್ಟ್ ನೀಡಿದ 30.03.2023 ರ ಆದೇಶಕ್ಕೆ ತಡೆ ನೀಡುವಂತೆ ಗೌರಿಶಂಕರ್ ಪರ ವಕೀಲರು ಒತ್ತಾಯಿಸಿದರು.
ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡದಿದ್ದರೆ ಗೌರಿಶಂಕರ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಲಾ ಗಿತ್ತು. ಸುರೇಶ್ ಗೌಡ ಪರ ವಾದ ಮಂಡಿಸಿದ ವಕೀಲರು, ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 8ಎ ಪ್ರಕಾರ ಗೌರಿಶಂಕರ್ ಅವರ ಅನರ್ಹತೆಯ ಬಗ್ಗೆ ರಾಷ್ಟ್ರಪತಿಗಳು ನಿರ್ಧಾರ ತೆಗೆದುಕೊಳ್ಳಬೇಕು, ಹೀಗಾಗಿ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡುವ ಅಗತ್ಯವಿಲ್ಲ ಎಂದು ಸೂಚಿಸಿದರು.
ಇಬ್ಬರೂ ವಕೀಲರ ಸಲ್ಲಿಕೆಯನ್ನು ಆಲಿಸಿದ ಗೌರವಾನ್ವಿತ ಸುಪ್ರೀಂ ಕೋರ್ಟ್ ಮಧ್ಯಂತರ ಕ್ರಮವಾಗಿ ಗೌರಿಶಂಕರ್ ಅವರು ವಿಧಾನಸಭೆಯಲ್ಲಿ ಜರುಗುವ ಯಾವುದೇ ಮತದಾನದಲ್ಲಿ ಮತದಾನದ ಹಕ್ಕನ್ನು ಚಲಾಯಿಸಲು ಅರ್ಹರಾಗಿರುವುದಿಲ್ಲ ಎಂಬ ನಿರ್ದೇಶನದೊಂದಿಗೆ ಗೌರವಾನ್ವಿತ ಹೈಕೋರ್ಟಿನ ಆದೇಶಕ್ಕೆ ತಡೆ ನೀಡಿತು. 15ನೇ ಕರ್ನಾಟಕ ವಿಧಾನಸಭೆ ವಿಸರ್ಜನೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ದೇಶನವು 15ನೇ ವಿಧಾನಸಭೆಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಕೂಡ ಆದೇಶದಲ್ಲಿ ಉಲ್ಲೇಖಿಸಿತು.
ಗೌರಿ ಶಂಕರ್ ಅವರು ಮುಂಬರುವ ಚುನಾವಣೆಯಲ್ಲಿ ಒಂದು ವೇಳೆ ಚುನಾಯಿತರಾದರೆ ಸೂಕ್ತ ನಿರ್ದೇಶನಗಳನ್ನು ನೀಡಲು ಪ್ರಕರಣವನ್ನು, ಚುನಾವಣಾ ಫಲಿತಾಂಶ ಹೊರ ಬಿದ್ದ ಕೂಡಲೇ ವಿಚಾರಣೆಯನ್ನು ಮತ್ತೆ ಕೈಗೆತ್ತಿಕೊಳ್ಳಲಾಗುವುದಾಗಿ ಆದೇಶ ಹೊರಡಿಸಿತು. ಈ ಹಿನ್ನಲೆಯಲ್ಲಿ ಗೌರಿ ಶಂಕರವರು ಒಂದು ವೇಳೆ ಚುನಾಯಿತರಾದರು ಕೂಡ ಸರ್ವೋಚ್ಛ ನ್ಯಾಯಾಲಯ ನೀಡಬಹುದಾದ ಆದೇಶಕ್ಕೆ ಬದ್ಧವಾಗಿರಬೇಕಾಗುತ್ತದೆ. ಹೀಗಾಗಿ ಗೌರಿ ಶಂಕರ್ ಮೇಲೆ ನ್ಯಾಯಾಂಗ ವ್ಯವಸ್ಥೆಯ ತೂಗು ಕತ್ತಿ ಹಾಗೆ ಉಳಿಯಲಿದೆ.