Thursday, December 12, 2024
Homeಜಿಲ್ಲೆಧಾರವಾಡರಾಜ್ಯ ಸರ್ಕಾರ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ‌ ಆಕ್ರೋಶ

ರಾಜ್ಯ ಸರ್ಕಾರ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ‌ ಆಕ್ರೋಶ

ಹುಬ್ಬಳ್ಳಿ ಧಾರವಾಡ | ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್  ಸರ್ಕಾರ ಜವಾಬ್ದಾರಿ ಇಲ್ಲದ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅಸಮಾಧಾನ ವ್ಯಕ್ತಪಡಿಸಿದರು.

ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ತಿಂಗಳು ಹತ್ತಿರ ಬಂದಿದೆ. ರಾಜ್ಯಕ್ಕೆ ನೈಸರ್ಗಿಕ ಆಪತ್ತು ಬರುತ್ತಿವೆ. ಮಾನ್ಸೂನ್ ಮಳೆ ತಡವಾಗಿದ್ದರಿಂದ ಬಿತ್ತನೆ ಕೂಡ ತಡವಾಗಿ ಆಗುತ್ತಿದೆ. ಮಾನ್ಸೂನ್ ಮಳೆ ಸಕಾಲಕ್ಕೆ ಬಾರದಿದ್ದರೆ ರೈತರಿಗೆ ಬಹಳಷ್ಟು ಕಷ್ಟವಾಗುತ್ತದೆ. ಮತ್ತೊಂದು ಕಡೆ ಭೀಕರ ಚಂಡಮಾರುತದ ಸೂಚನೆ ಸಹ ಬರುತ್ತಿವೆ. ಹೀಗಿದ್ದರೂ ಸಿಎಂ ಇವುಗಳನ್ನು ನಿಭಾಯಿಸಲು ಯಾವುದೇ ರೀತಿ  ಸನ್ನದ್ಧವಾಗಿಲ್ಲ ಎಂದರು.

ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ರಾಜ್ಯದಲ್ಲಿರುವ ಡ್ಯಾಂ ಗಳ ನೀರು ಅತ್ಯಂತ ಕೆಳಮಟ್ಟದಲ್ಲಿದೆ‌. ಆದರೆ ನಾನು ಇಷ್ಟು ಬೇಗ ರಾಜ್ಯದಲ್ಲಿ ಬರಗಾಲ ಬರಲಿದೆ ಎಂದು ಹೇಳುವುದಿಲ್ಲ. ಆದರೆ ರಾಜ್ಯ ಸರ್ಕಾರ ಸಮರ್ಪಕವಾಗಿ ಯೋಜನೆಗಳನ್ನು ಮಾಡಿಕೊಳ್ಳಬೇಕು. ತಾಲ್ಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಿ ಅದರಲ್ಲಿ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳನ್ನು ಸೇರಿಸಿ, ಅವರಿಂದ ಸಹಕಾರ ಪಡೆಯಬೇಕು. ಈ ಕೂಡಲೇ ನೂರು ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಬೇಕು. ಎನ್‌ಡಿ‌ಆರ್‌ಎಫ್ ತಂಡಗಳನ್ನು ಚುರುಕುಗೊಳಸಬೇಕು. ನಗರ ಪ್ರದೇಶಗಳಲ್ಲಿಯೂ ಸಹ ಕುಡಿಯುವ ನೀರಿನ ಸಮಸ್ಯೆಯಿದೆ. ಈ ಸರ್ಕಾರ ಜನರಿಗೆ ಸಹಾಯಕವಲ್ಲದ ಸರ್ಕಾರವಾಗಿದೆ ಎಂದರು.

ಗ್ಯಾರಂಟಿ ಬಗ್ಗೆ ಕಾದುನೋಡುವ ತಂತ್ರ ನಮ್ಮದಾಗಿದೆ. ಉಚಿತ ಬಸ್ ಪಾಸ್ ಆರಂಭದ ಶೂರತ್ವವನ್ನು ಸರ್ಕಾರ ತೋರಿಸುತ್ತಿದೆ. ಗ್ಯಾರಂಟಿ ರೂಪದಲ್ಲಿ ತಾಯಿಯಂದ್ರಿಗೆ ಉಚಿತ ನೀಡುವ ಸಲುವಾಗಿ ಅವರಿಗೆ ಸಮರ್ಪಕ ಪ್ರಯಾಣ ಇಲ್ಲದಂತೆ ಆಗುತ್ತಿದೆ. ರಾಜ್ಯದಲ್ಲಿ ಬಸ್ ಗಳ ಸಮಸ್ಯೆ ಆಗುತ್ತಿದೆ. ಈಗಾಗಲೇ ನಾವು ಡೀಸೆಲ್‌ ಅನುದಾನ ಬಿಡುಗಡೆ ಮಾಡಿದ್ದೇವೆ. ಅದನ್ನು ಮುಂದುವರಿಕೆ ಮಾಡಬೇಕು. ಗ್ಯಾರಂಟಿಗಳಿಗೆ ಹಣಕಾಸಿನ ಹೊಂದಾಣಿಕೆ ಬಗ್ಗೆ ಸರ್ಕಾರ‌ ಸ್ಪಷ್ಟವಾಗಿ ಹೇಳುತ್ತಿಲ್ಲ. ಹಣಕಾಸಿನ ವಿಚಾರದಲ್ಲಿ ಜನರನ್ನು ಕತ್ತಲಲ್ಲಿ ಇಡಲು ಸರ್ಕಾರ ಮುಂದಾಗಿದೆ. ಗ್ಯಾರಂಟಿ ವಿಚಾರದಲ್ಲಿ ಹಣಕಾಸಿನ ಬಗ್ಗೆ ಮಾಹಿತಿ ಪಡೆಯುವುದು ಪ್ರತಿಯೊಂದು ಕನ್ನಡಿಗನ ಹಕ್ಕು. ಇದು ಒಂದು ಕೈಯಲ್ಲಿ ತೆಗೆದುಕೊಂಡು ಮತ್ತೊಂದು ಕೈಯಲ್ಲಿ ಕೂಡುವಂತಾಗಿದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments