ತುಮಕೂರು | ಹಾಡು ಹಗಲೇ ಯುವಕನೊಬ್ಬನ ಕತ್ತು ಕುಯ್ದು ಭೀಕರವಾಗಿ ಹತ್ಯೆ ಮಾಡಿರುವಂತಹ ಘಟನೆ ತುಮಕೂರಿನಲ್ಲಿ ಸೋಮವಾರ ಸಂಜೆ ನಡೆದಿದೆ.
ತುಮಕೂರು ನಗರದಲ್ಲಿರುವ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಟಾಯ್ಲೆಟ್ ಕ್ಲೀನಿಂಗ್ ಕೆಲಸ ಮಾಡಿಕೊಂಡಿದ್ದ ಯುವಕನನ್ನು ಸೋಮವಾರ ಸಂಜೆ ಸುಮಾರು 5:30 ರಲ್ಲಿ ಕುತ್ತಿಗೆ ಸೀಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ.
ಕೊಲೆಯಾದ ವ್ಯಕ್ತಿಯನ್ನು ಬಿಹಾರ ಮೂಲದ ಲಖನ್ ಮಾನ್ಸಿ (32) ಎಂದು ಗುರುತಿಸಲಾಗಿದೆ. ಕಳೆದ 6-7 ತಿಂಗಳಿನಿಂದ ತುಮಕೂರಿನ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಟಾಯ್ಲೆಟ್ ಕ್ಲೀನಿಂಗ್ ಕೆಲಸ ಮಾಡಿಕೊಂಡಿದ್ದನು ಎನ್ನಲಾಗಿದೆ. ಆದರೆ ಕೊಲೆ ಮಾಡಿದವರು ಯಾರು, ನಿಖರ ಕಾರಣವೇನು ಎಂಬುದು ಮಾತ್ರ ಇನ್ನೂ ತಿಳಿದು ಬಂದಿಲ್ಲ.
ಘಟನೆಯ ಸ್ಥಳಕ್ಕೆ ತುಮಕೂರು ನಗರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ಮೃತ ದೇಹವನ್ನು ಸರ್ಕಾರಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ. ಜೊತೆಗೆ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.