ಬೆಂಗಳೂರು | ರಾಜ್ಯ ರಾಜಕಾರಣದಲ್ಲಿ ಕೆಪಿಸಿಸಿ (ಕರ್ನಾಟಕ ಪ್ರಾಂತ ಕಾಂಗ್ರೆಸ್ ಸಮಿತಿ) ಅಧ್ಯಕ್ಷ ಸ್ಥಾನದ ಬದಲಾವಣೆ ಕುರಿತು ಚರ್ಚೆಗಳು ತೀವ್ರಗೊಂಡಿವೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi), ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ, ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟಪಡಿಸಿದ್ದಾರೆ.
ಸುರ್ಜೇವಾಲಾ ಭೇಟಿ ಕುರಿತು ಹೇಳಿಕೆ
ಸತೀಶ್ ಜಾರಕಿಹೊಳಿ (Satish Jarkihol), ದೆಹಲಿಯಲ್ಲಿ ಆರ್‌ಎಫ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಪಕ್ಷ ಸಂಘಟನೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಪಕ್ಷ ಸಂಘಟನೆಯ ಬಲವರ್ಧನೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತಾಗಿ ನಾನು ನನ್ನ ಅಭಿಪ್ರಾಯಗಳನ್ನು ಉಸ್ತುವಾರಿಗಳಿಗೆ ತಿಳಿಸಿದ್ದೇನೆ. ಮತ ತರುವ ಸಾಮರ್ಥ್ಯ ಇರುವ ವ್ಯಕ್ತಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಪ್ರಸ್ತಾಪಿಸಿದ್ದೇನೆ. ಡಿ.ಕೆ. ಶಿವಕುಮಾರ್ ಅವರು ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಸಚಿವನಾಗಿ ಸಮರ್ಪಕ ಚಟುವಟಿಕೆ ಕೊರತೆ
ಸತೀಶ್ ಜಾರಕಿಹೊಳಿ (Satish Jarkiholi) ಪಕ್ಷದ ಸಂಘಟನೆ ಕಡಿಮೆಯಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. 2023 ರಲ್ಲಿ ಇದ್ದ ವೇಗವನ್ನು ಪುನಃ ತರಬೇಕಾಗಿದೆ. ಶಾಸಕರ ಅಭಿಪ್ರಾಯ ಆಲಿಸಿ, ಅವರ ಅಭಿಪ್ರಾಯದಂತೆ ಹೊಸ ಅಧ್ಯಕ್ಷರನ್ನು ನೇಮಿಸಬೇಕಾಗಿದೆ. ಸಚಿವರಾದ ಮೇಲೆ ಪಕ್ಷದ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಕಡಿಮೆಯಾಗಿದೆ. ಇದನ್ನು ಸರಿಪಡಿಸಬೇಕಾಗಿದೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಬದಲಾವಣೆಯ ಅಗತ್ಯ
ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಶೀಘ್ರ ಬದಲಾವಣೆ ಮಾಡುವ ಅಗತ್ಯವಿದೆ. ನಾನು ಅಧ್ಯಕ್ಷರಾಗಬೇಕೆಂದು ಕೇಳಿಲ್ಲ. ಆದರೆ ಒಬ್ಬ ಪೂರ್ಣ ಪ್ರಮಾಣದ ಮತ್ತು ಜನಪ್ರಿಯ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಹೇಳಿದ್ದೇನೆ. ಸ್ಪಷ್ಟತೆ ಮತ್ತು ಗೊಂದಲ ನಿವಾರಣೆಗಾಗಿ ಹೈಕಮಾಂಡ್ ತೀರ್ಮಾನ ತೋರಿಸಬೇಕು ಎಂದು ಹೇಳಿದ್ದಾರೆ.
![](https://i0.wp.com/karnataka360.in/wp-content/uploads/2025/01/473418573_1165002718329872_4463030176189024607_n-1024x923.jpg?resize=696%2C627&ssl=1)
ಸಿಎಲ್‌ಪಿ ಸಭೆ ಮತ್ತು ಆಂತರಿಕ ವಿವಾದ
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಿಎಲ್‌ಪಿ ಸಭೆಯ ವೇಳೆ ಉಂಟಾದ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್, ಬೆಳಗಾವಿ ಕಟ್ಟಡ ಮತ್ತು ಪಿಎಲ್‌ಡಿಬಿ ಬ್ಯಾಂಕಿನ ವಿಚಾರ ಬೇರೆ ಬೇರೆ ವಿಷಯಗಳು. ತಿಕ್ಕಾಟ ಹೊಸದು ಅಲ್ಲ, ಆದರೆ ಇದನ್ನು ಸರಿಪಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಸಮಸ್ಯೆಗಳ ಪರಿಹಾರಕ್ಕಾಗಿ ಒಂದು ಸಲ ಅವರ ಮಾತು ಕೇಳಿ, ಮತ್ತೊಂದು ಸಲ ನಮ್ಮ ಮಾತು ಕೇಳಬೇಕು ಎಂದು ಹೇಳಿದ್ದಾರೆ.
ದೆಹಲಿಗೆ ತೆರಳಲು ಸತೀಶ್ ಜಾರಕಿಹೊಳಿ (Satish Jarkiholi) ಸಿದ್ಧತೆ
ಸತೀಶ್ ಜಾರಕಿಹೊಳಿ, ಈ ತಿಂಗಳ ಅಂತ್ಯದಲ್ಲಿ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ತನ್ನ ಅಭಿಪ್ರಾಯವನ್ನು ಹಂಚಿಕೊಳ್ಳಲಿದ್ದಾರೆ. ಜೆ. 27 ಅಥವಾ 28 ರಂದು ದೆಹಲಿಗೆ ಹೋಗಿ ನನ್ನ ಅಭಿಪ್ರಾಯವನ್ನು ಹೇಳಲು ಸಿದ್ಧರಾಗಿದ್ದೇನೆ.ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಮತ್ತು ಆಪ್ತ ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ.
ಹೈಕಮಾಂಡ್ ತೀರ್ಮಾನಕ್ಕೆ ನಿರೀಕ್ಷೆ
ಲೋಕಸಭಾ ಚುನಾವಣೆಯಾಗಿ ಆರು ತಿಂಗಳು ಕಳೆದಿವೆ. ಹೈಕಮಾಂಡ್ ಕೈಗೊಂಡ ತೀರ್ಮಾನವನ್ನು ಅನುಷ್ಠಾನಕ್ಕೆ ತರಬೇಕಾಗಿದೆ ಎಂದು ಸತೀಶ್ ಜಾರಕಿಹೊಳಿ ಒತ್ತಿಹೇಳಿದರು. ಅವರ ಈ ಹೇಳಿಕೆಗಳಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದ ರಾಜಕೀಯ ಚರ್ಚೆಗಳು ಮತ್ತಷ್ಟು ಚುರುಕಾಗಿದೆ. ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನವು ಈ ಗೊಂದಲಗಳಿಗೆ ಪರಿಹಾರ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.