ಬೆಂಗಳೂರು | ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಅಮಾನವೀಯ ಘಟನೆ ವರದಿಯಾಗಿದೆ. ಚಾಮರಾಜಪೇಟೆಯಲ್ಲಿ ನಡೆದ ಈ ಘಟನೆ ಜನರನ್ನು ನಡುಗಿಸಿಸಿದೆ. ತಡರಾತ್ರಿ ಮೂಕ ಪ್ರಾಣಿಗಳ ಮೇಲೆ ವಿಕೃತ ಕೃತ್ಯ ನಡೆಸಿರುವ ದುಷ್ಕರ್ಮಿಗಳು, ಮೂರು ಹಸುಗಳ ಕೆಚ್ಚಲನ್ನು (Cow’ Udder) ಕೊಯ್ದು ಪರಾರಿಯಾಗಿದ್ದಾರೆ. ಘಟನೆಯ ಬಳಿಕ, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಕೆಚ್ಚಲು ಕೊಯ್ದ (Cow’ Udder) ಅಮಾನವೀಯ ಕೃತ್ಯ
ಚಾಮರಾಜಪೇಟೆಯ ಓಲ್ಡ್ ಪೆನ್ಷನ್ ಮೊಹಲ್ಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕರ್ಣ ಎಂಬುವವರ ಸಾಕಾಣಿಕೆಯಲ್ಲಿ ಇರುವ ಹಸುಗಳಲ್ಲಿ ಮೂರು ಹಸುಗಳಿಗೆ ಇಂತಹ ಕೃತ್ಯವೆಸಗಲಾಗಿದೆ. ತಡರಾತ್ರಿ ಮನೆಯಿಂದ ದೂರದ ರಸ್ತೆಯಲ್ಲಿ ಮಲಗಿದ್ದ ವೇಳೆ ದುಷ್ಕರ್ಮಿಗಳಿಂದ ಈ ಭೀಕರ ಕೃತ್ಯವು ನಡೆದಿದೆ. ಹಸುಗಳ ಕೆಚ್ಚಲು (Cow’ Udder) ಕತ್ತರಿಸುವ ಮೂಲಕ, ದುಷ್ಕರ್ಮಿಗಳು ಮಾರಕ ಕೃತ್ಯವೆಸಗಿದ್ದಾರೆ. ಬೆಳಗಿನ ಜಾವ ಈ ಘಟನೆಯ ಮಾಹಿತಿ ಬೆಳಕಿಗೆ ಬಂದಿದ್ದು, ಸದ್ಯ ಗಾಯಗೊಂಡ ಹಸುಗಳಿಗೆ ಚಾಮರಾಜಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ನೀಡಲಾಗುತ್ತಿದೆ.
ಸ್ಥಳಕ್ಕೆ ಬಿಜೆಪಿ ನಾಯಕರು ಭೇಟಿ
ಘಟನೆಯ ಮಾಹಿತಿ ತಿಳಿದು ಸಂಸದ ಪಿಸಿ ಮೋಹನ್ ಸ್ಥಳಕ್ಕೆ ಭೇಟಿ ನೀಡಿ, ಅಮಾನವೀಯ ಕೃತ್ಯಕ್ಕೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಕಿಡಿಗೇಡಿಗಳಿಗೆ ತಕ್ಷಣ ಕಠಿಣ ಶಿಕ್ಷೆ ನೀಡುವಂತೆ ಅವರು ಆಗ್ರಹಿಸಿದ್ದಾರೆ. ಸ್ಥಳೀಯರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಠಿ
ಈ ಘಟನೆಯ ಪರಿಣಾಮ, ಸ್ಥಳದಲ್ಲಿ ಭಾರಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕಾಟನ್ ಪೇಟೆ ಪೊಲೀಸರು ಮತ್ತು ಚಿಕ್ಕಪೇಟೆ ಎಸಿಪಿ ರಮೇಶ್ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಈ ಭಾಗದಲ್ಲಿ ಡ್ರಗ್ಸ್ ಮತ್ತು ಗಾಂಜಾ ಸೇವನೆ ಹೆಚ್ಚಿರುವುದನ್ನು ಸ್ಥಳೀಯರು ಇದೀಗ ಚರ್ಚೆಗೆ ಎತ್ತಿದ್ದಾರೆ.
ಮಾಲೀಕರ ನೋವು ಮತ್ತು ಪ್ರತಿಕ್ರಿಯೆ
ಹಸುಗಳ ಮಾಲೀಕ ಕರ್ಣ ಈ ದಾರುಣ ಘಟನೆಯ ಬಗ್ಗೆ ತಮ್ಮ ನೋವು ತೋಡಿಕೊಂಡಿದ್ದಾರೆ. ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕು. ಹಸುಗಳಿಗೆ ಈ ಕೃತ್ಯ ಮಾಡಿದವರನ್ನು ಕಠಿಣವಾಗಿ ಶಿಕ್ಷಿಸಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ. ಪ್ರಕರಣವು ರಾಜಕೀಯ ತಿರುವು ಪಡೆಯುತ್ತಿದ್ದು, ಸಾರ್ವಜನಿಕರು ಕೂಡಾ ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ.
ಒಟ್ಟಿನಲ್ಲಿ ಮೂಕ ಪ್ರಾಣಿಗಳ ಮೇಲಿನ ಈ ಅಮಾನವೀಯ ಕೃತ್ಯವು ಸಾರ್ವಜನಿಕ ಆಕ್ರೋಶವನ್ನು ಉಂಟುಮಾಡಿದ್ದು, ಈ ಕುರಿತು ತಕ್ಷಣ ಕ್ರಮಕೈಗೊಳ್ಳುವ ಅಗತ್ಯ ಇದೆ.