ತುಮಕೂರು | ಅನುದಾನ ದುರ್ಬಳಕೆ ಆರೋಪದ ಮೇಲೆ ತುಮಕೂರು ಜಿಲ್ಲೆಯ ಮಧುಗಿರಿ ಟೌನ್ ಕೆ.ಆರ್. ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಅನುಪಮಾ ಹೆಚ್.ಎಸ್. (Headmistress Anupama) ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಮಧುಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎನ್. ಹನುಮಂತರಾಯಪ್ಪ ಆದೇಶ ಹೊರಡಿಸಿದ್ದಾರೆ.
ಪಿಎಂಶ್ರೀ ಅನುದಾನ ದುರ್ಬಳಕೆ ಮಾಡಿಕೊಂಡಿದ್ದ ಮುಖ್ಯ ಶಿಕ್ಷಕಿ
ಪಿಎಂಶ್ರೀ ಅನುದಾನ ದುರ್ಬಳಕೆಯಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಮಧುಗಿರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ 2024ರ ಡಿಸೆಂಬರ್ 18 ಮತ್ತು 19ರಂದು ನಡೆಸಲಾದ ತಪಾಸಣೆ ವೇಳೆ ಅನುಪಮಾ ಅವರು ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 10(1)(ಎ)ರನ್ವಯ ಇಲಾಖಾ ವಿಚಾರಣೆ ಹಾಗೂ ಸೂಕ್ತ ಶಿಸ್ತುಕ್ರಮ ಕಾಯ್ದಿರಿಸಿ ಅಮಾನತ್ತುಗೊಳಿಸಲಾಗಿದೆ.
ಅನುಪಮಾ (Headmistress Anupama) ಅವರಿಗೆ ಜೀವನಾಧಾರ ಭತ್ಯೆ
ಅಮಾನತ್ತಿನ ಅವಧಿಯಲ್ಲಿ ಕೆಸಿಎಸ್ಆರ್ ನಿಯಮ 98(ಎ) ಮತ್ತು ಸರ್ಕಾರದ ಆದೇಶ ದಿನಾಂಕ:10-8-1987ರ ಮೇರೆಗೆ ಅನುಪಮಾ ಅವರಿಗೆ ಜೀವನಾಧಾರ ಭತ್ಯೆ ಪಾವತಿಸಲು ಮಂಜೂರಾತಿ ನೀಡಲಾಗಿದೆ. ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡಬಾರದೆಂದು ಅನುಪಮಾ ಅವರಿಗೆ ಅಮಾನತ್ತು ಆದೇಶದಲ್ಲಿ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.