ತುಮಕೂರು | ಮಹಿಳೆಯ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಕಳ್ಳನೊಬ್ಬ ಕಿತ್ತುಕೊಂಡು ಹೋಗಿದ್ದು, ಇದೀಗ ಆತನನ್ನು ಬಂಧಿಸುವಲ್ಲಿ ತುಮಕೂರು (Tumkur News) ಜಿಲ್ಲೆಯ ತಿಪಟೂರು ಪೊಲೀಸರು ಯಶಸ್ವಿಯಾಗಿದ್ದಾರೆ.
2024ರ ಅಕ್ಟೋಬರ್ 17 ರಂದು ಸಂಜೆ ತಿಪಟೂರು ನಗರದ ಮಂಜುಳಮ್ಮ ಗಾರ್ಡನ್ ಏರಿಯಾ ನಿವಾಸಿಯಾದ ವೆಂಕಟಮ್ಮ ಅವರು ಮಧ್ಯಾಹ್ನ ಸುಮಾರು 12 ಗಂಟೆ ಸಮಯದಲ್ಲಿ ತನ್ನ ಮನೆಯ ಕಡೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಬಜಾಜ್ ಪಲ್ಸರ್ ಬೈಕ್ ನಲ್ಲಿ ಇಬ್ಬರು ಆಸಾಮಿಗಳು ಬಂದು ಆಕೆಯ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಹಿಂಬದಿಯ ಬೈಕ್ ಸವಾರ ಕಿತ್ತುಕೊಳ್ಳಲು ಪ್ರಯತ್ನಪಟ್ಟಿದ್ದಾನೆ. ಈ ವೇಳೆ ಆಕೆ ಬಿಗಿಯಾಗಿ ಹಿಡಿದುಕೊಂಡಿದ್ದರಿಂದ ಅರ್ಧ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದು, ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ವೆಂಕಟಮ್ಮ ಈ ಬಗ್ಗೆ ದೂರನ್ನು ದಾಖಲು ಮಾಡಿದ್ದರು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಖಾಡಕ್ಕಿಳಿದ ತಿಪಟೂರು ಪೊಲೀಸರು ಅಸ್ಕರ್ ಅಲಿ ಎಂಬಾತನನ್ನು ಬಂದಿಸಿದ್ದು, ಆರೋಪಕ್ಕೆ ಬಳಸಿದ್ದ ಬಜಾಜ್ ಪಲ್ಸರ್ ಬೈಕ್ ಅನ್ನು ಆತನಿಂದ ವಶಪಡಿಸಿಕೊಂಡಿದ್ದರು, ಈತನು ನೀಡಿದ ಮಾಹಿತಿಯ ಆಧಾರದ ಮೇಲೆ ಮತ್ತೊಬ್ಬ ಆರೋಪಿಯನ್ನು ಮಹಾರಾಷ್ಟ್ರ ರಾಜ್ಯದ ಪೂನಾ ನಗರದ ಇರಾನಿ ಗಲ್ಲಿಯಲ್ಲಿದ್ದ ಹೈದರ್ ಅಲಿ ಎಂಬಾತನನ್ನು ಬಂಧಿಸಿದ್ದಾರೆ.
ತಿಪಟೂರು ನಗರದಲ್ಲಿ ಹಾಗೂ ಹುಳಿಯರು, ಚಿಕ್ಕನಾಯಕನಹಳ್ಳಿ ಮತ್ತು ಚನ್ನಪಟ್ಟಣ ನಗರದಲ್ಲಿ ಸರಗಳ್ಳತನ ಮಾಡಿದ್ದ ಒಟ್ಟು 5 ಪ್ರಕರಣಗಳಲ್ಲಿ 7 ಲಕ್ಷ ರೂ ಬೆಲೆ ಬಾಳುವ 100 ಗ್ರಾಂ ತೂಕದ ಚಿನ್ನದ ಒಡವೆಗಳನ್ನು 1 ಲಕ್ಷ ರೂ ಬೆಲೆ ಬಾಳುವ ಬಜಾಜ್ ಪಲ್ಸರ್ ಬೈಕ್ ಅನ್ನು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣವನ್ನು ಬೇಧಿಸಿ ಆರೋಪಿ ಮತ್ತು ಮಾಲನ್ನು ಪತ್ತೆಹಚ್ಚಲು ಶ್ರಮಿಸಿದ ಪೊಲೀಸ್ ಸಿಬ್ಬಂದಿಗಳ ಕಾರ್ಯವೈಕರಿಯ ಬಗ್ಗೆ ತುಮಕೂರು ಜಿಲ್ಲಾ ಪೊಲೀಸ್ ಅಧ್ಯಕ್ಷರಾದ ಅಶೋಕ್ ಕೆ ವಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.