ತುಮಕೂರು | ಅಖಿಲ ಕರ್ನಾಟಕ ಅಗ್ನಿವಂಶ ಕ್ಷತ್ರಿಯ (Agnivamsha Kshatriya) (ತಿಗಳ) ನೌಕರರ ಸಂಘದ ಸರ್ವ ಸದಸ್ಯರ ಮಹಾಸಭೆ, ಎಸ್.ಎಸ್.ಎಲ್.ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಜನಾಂಗದ ನಿವೃತ್ತ ನೌಕರರನ್ನು ಸನ್ಮಾನಿಸಲು ನಗರದಲ್ಲಿರುವ ತಿಗಳರ ಹಾಸ್ಟೆಲ್ ನ ವಿದ್ಯಾ ಸಿರಿ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಸಂಘದ ಅಧ್ಯಕ್ಷರಾದ ಸಿ. ನಂಜಯ್ಯ ಅವರು ಮಾತನಾಡಿ, ಕಳೆದ ಹಲವು ವರ್ಷಗಳಿಂದ ಸರ್ವ ಸದಸ್ಯರ ಮಹಾಸಭೆಯ ಸಂದರ್ಭದಲ್ಲಿ, ಸರ್ಕಾರಿ ಹಾಗೂ ಅರೆ ಸರ್ಕಾರಿ ನಿವೃತ್ತ ನೌಕರರನ್ನು ಗುರುತಿಸಿ ಸನ್ಮಾನಿಸುವ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಎಷ್ಟೋ ವಿದ್ಯಾರ್ಥಿಗಳನ್ನು ಅಧಿಕ ಅಂಕಗಳನ್ನು ಪಡೆದ ಹಿನ್ನೆಲೆಯಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನೂ ಗೌರವಿಸುವ ಕಾರ್ಯವನ್ನು ಸಂಘ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದರು.
ಸಮಾಜಮುಖಿ ಪ್ರಗತಿ
ಕರ್ನಾಟಕ ಅಗ್ನಿವಂಶ ಕ್ಷತ್ರಿಯ (ತಿಗಳ) ನೌಕರರ ಸಂಘವು ಸಾಮಾಜಿಕ ಜವಾಬ್ದಾರಿ ಹಾಗೂ ಕಾರ್ಯಕ್ರಮಗಳ ಆಯೋಜನೆಗೆ ಮುಂಚೂಣಿಯಲ್ಲಿದೆ. ತುಮಕೂರು ಜಿಲ್ಲೆಯ ನೌಕರರನ್ನು ಒಂದೆಡೆ ಸೇರುತ್ತಿದ್ದು, ಸಂಘಟನೆಯಿಂದ ಸದಸ್ಯರ ಮಕ್ಕಳಿಗೆ ಸನ್ಮಾನ ಮಾಡುವುದು, ಸಂಘದ ಹೆಮ್ಮೆಯ ಭಾಗವಾಗಿದೆ ಎಂದರು. ಇಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ವಿದ್ಯಾಭಿವೃದ್ಧಿ ಸಂಘ ಮತ್ತು ನೌಕರರ ಕುಟುಂಬಗಳಿಂದ ಸಹಕಾರ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅರ್ಥಪೂರ್ಣ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ಸಂಘದ 24 ವರ್ಷಗಳ ಸೇವೆ
ಸಂಘದ ಹಿರಿಯ ಮುಖಂಡ ಅನಂತರಾಜು ಅಗ್ನಿವಂಶಿ ಮಾತನಾಡಿ, ಸಂಘ 24 ವರ್ಷಗಳನ್ನು ಪೂರೈಸಿದ್ದು, 2024ನೇ ಸಾಲಿನ ವಾರ್ಷಿಕ ಸಭೆಗೆ ಅಪಾರ ಬೆಂಬಲ ದೊರೆತಿರುವುದಾಗಿ ತಿಳಿಸಿದರು. ವಿದ್ಯಾರ್ಥಿಗಳು, ಪೋಷಕರು, ನೌಕರರು, ನಿವೃತ್ತ ನೌಕರರು ತಮ್ಮ ಶ್ರಮದಿಂದ ಈ ಕಾರ್ಯಕ್ರಮ ಯಶಸ್ವಿ ಮಾಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳು ಎಂದು ಹೇಳಿದರು. ನಿವೃತ್ತ ನೌಕರರ ಗೌರವ ಹಾಗೂ ವಿದ್ಯಾರ್ಥಿಗಳ ಪುರಸ್ಕಾರ ಸಂಘದ ಮುಖ್ಯ ಉದ್ದೇಶವಾಗಿದೆ ಎಂದು ಪುನಃ ಒತ್ತಿಹೇಳಿದರು.
ಇದೆ ವೇಳೆಯಲ್ಲಿ ಸಂಘದ ಕಾರ್ಯದರ್ಶಿ ಜಯರಾಮ್, ಖಜಾಂಚಿ ರವೀಂದ್ರ, ಜಂಟಿ ಕಾರ್ಯದರ್ಶಿ ಜಗದೀಶ್, ಶಿವಣ್ಣ, ಚಿಕ್ಕಹನುಮಯ್ಯ ಸೇರಿದಂತೆ ಹಲವಾರು ನೌಕರರು, ವಿದ್ಯಾರ್ಥಿಗಳು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಯಾಗಿಸಿದರು.