ತೆಲಂಗಾಣ | ಇಡೀ ಪ್ರಪಂಚದಾದ್ಯಂತ ಪುಷ್ಪ-2 (Pushpa 2) ಸಿನಿಮಾ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ವೇಳೆ ನಟ ಅಲ್ಲು ಅರ್ಜುನ್ (Allu Arjun) ಅವರಿಗೆ ಒಂದಲ್ಲ ಒಂದು ಸಂಕಷ್ಟ ಎದುರಾಗುತ್ತಿದೆ.
ಹೌದು.. ಡಿ.4 ರಂದು ಹೈದರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿ ʼಪುಷ್ಪ-2ʼ ಪ್ರಿಮಿಯರ್ ಶೋ ವೇಳೆ ರೇವತಿ ಎನ್ನುವ ಮಹಿಳೆ ಕಾಲ್ತುಳಿತ ಉಂಟಾಗಿ ಮೃತಪಟ್ಟಿದ್ದರು. ಈ ಘಟನೆ ಸಂಬಂಧ ಅಲ್ಲು ಅರ್ಜುನ್ ಸೇರಿದ ಇತರರನ್ನು ಬಂಧಿಸಲಾಗಿತ್ತು. ಮಧ್ಯಂತರ ಜಾಮೀನು ಪಡೆದು ಅಲ್ಲು ಅರ್ಜುನ್ ಆಚೆ ಬಂದಿದ್ದರು.
ಈ ಘಟನೆ ಆಂಧ್ರದಲ್ಲಿ ರಾಜಕೀಯವಾಗಿ ತಿರುಗಿದ್ದು ಕೆಲ ಪಕ್ಷಗಳು ಘಟನೆಯ ಪರ – ವಿರೋಧದ ಬಗ್ಗೆ ಮಾತನಾಡುತ್ತಿದ್ದಾರೆ. ಕೆಲ ವಿದ್ಯಾರ್ಥಿ ಸಂಘಟನೆಗಳು ಅಲ್ಲು ಅರ್ಜುನ್ ನಿವಾಸದ ಮುಂದೆ ಪ್ರತಿಭಟನೆಗೆ ಇಳಿದಿವೆ.
ಇನ್ನೂ ಜೂಬಿಲಿ ಹಿಲ್ಸ್ನಲ್ಲಿ ಅರ್ಜುನ್ ಅವರ ನಿವಾಸದ ಎದುರು ಒಯು ಜೆಎಸಿ ಸಂಘಟನೆಯ ಕಾರ್ಯಕರ್ತರು ಅಲ್ಲು ಅರ್ಜುನ್ ಅವರ ವಿರುದ್ಧ ಧಿಕ್ಕಾರ ಕೂಗಿ ಅವರ ಮನೆಗೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲು ಅರ್ಜುನ್ ನಿವಾಸದ ಎದುರಿದ್ದ ಹೂಕುಂಡಗಳನ್ನು ಒಡೆದು ಮನೆಯೊಳಗೆ ನುಗ್ಗಲು ಯತ್ನಿಸಿದ್ದಾರೆ.
ರೇವತಿ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿ ಅಲ್ಲು ಅರ್ಜುನ್ ನಿವಾಸದ ಮುಂದೆ ಪ್ರತಿಭಟನಾಕಾರರು ದಾಂಧಲೆ ಎಬ್ಬಿಸಿದ್ದಾರೆ. ಸದ್ಯ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲು ಅರ್ಜುನ್ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಈಗಾಗಲೇ ಅಲ್ಲು ಅರ್ಜುನ್ ಅವರು ಈ ಘಟನೆಯಿಂದ ತಮಗೆ ತುಂಬಾ ನೋವಾಗಿದೆ. ರೇವತಿ ಅವರ ಕುಟುಂಬದ ಜತೆ ನಾವಿರುತ್ತೇವೆ ಎಂದಿದ್ದು, 25 ಲಕ್ಷ ರೂ. ಘೋಷಿಸಿದ್ದಾರೆ.
ಮತ್ತೊಂದು ಕಡೆ ಫ್ಯಾನ್ಸ್ಗಳಿಗೆ ಅಲ್ಲು ಅರ್ಜುನ್ ಅವರು ವಿಶೇಷ ಮನವಿ ಮಾಡಿದ್ದಾರೆ. ಯಾರು ಕೂಡ ಯಾರಿಗೂ ಅಸಂಬದ್ಧ ಹಾಗೂ ಅಶ್ಲೀಲವಾಗಿ ಆನ್ ಲೈನ್ ಅಥವಾ ಆಫ್ ಲೈನ್ ನಲ್ಲಿ ಕಾಮೆಂಟ್ ಮಾಡಲು ಹೋಗಬೇಡಿ. ನಕಲಿ ಖಾತೆ ಬಳಸಿ ತನ್ನ ಅಭಿಮಾನಿಗಳೆಂದು ಹೇಳಿ ಅಶ್ಲೀಲ ಭಾಷೆ ಬಳಸಿದರೆ ಅಂಥವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.