ಆರೋಗ್ಯ | ರಾಜ್ಯದಲ್ಲಿ ಮಲೇರಿಯ (Malaria) ರೋಗವನ್ನು 2025ಕ್ಕೆ ಸಂಪೂರ್ಣ ನಿವಾರಣೆ ಮಾಡುವ ಗುರಿಯನ್ನು ಹೊಂದಿದ್ದು, ಮಲೇರಿಯಾ (Malaria) ರೋಗ ನಿರ್ಮೂಲನೆ ಮಾಡಲು ಸಮುದಾಯ ಹಂತದಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾ ಆರೋಗ್ಯ (health) ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಮಂಜುನಾಥ್ (Dr. Manjunath) ತಿಳಿಸಿದರು.
ತುಮಕೂರು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಂಣದಲ್ಲಿಂದು ಮಲೇರಿಯ ರೋಗ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರಲ್ಲಿ ಮಲೇರಿಯ ರೋಗದ ಬಗ್ಗೆ ಅರಿವು ಮೂಡಿಸಲು ವಿಶ್ವದಾದ್ಯಂತ 2008 ರಿಂದ ಪ್ರತಿ ವರ್ಷ ಏಪ್ರಿಲ್ 25 ರಂದು ವಿಶ್ವ ಮಲೇರಿಯ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 2024ರಲ್ಲಿ ಯಾವುದೇ ಮಲೇರಿಯ ಪ್ರಕರಣಗಳು ಕಂಡು ಬಂದಿಲ್ಲ. ಹೊರ ರಾಜ್ಯದಿಂದ ಜಿಲ್ಲೆಗೆ ವಲಸೆ ಬಂದವರಲ್ಲಿ 14 ಪ್ಲಾಸ್ಮೊಡಿಯಂ ವೈವ್ಯಾಕ್ಸ್ ಮಲೇರಿಯ ಪ್ರಕರಣಗಳು ದಾಖಲಾಗಿದ್ದು, 123 ಡೆಂಗ್ಯೂ ಹಾಗೂ 30 ಚಿಕನ್ಗುನ್ಯ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕರು ಯಾವುದೇ ಜ್ವರವಿರಲಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಮಲೇರಿಯ ದೃಢಪಟ್ಟಲ್ಲಿ ಸೂಕ್ತ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು. ಮನೆಗಳಲ್ಲಿ ಸೊಳ್ಳೆ ಪರದೆ, ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನಿರೋಧಕ ಜಾಲರಿಗಳನ್ನು ಅಳವಡಿಸಿಕೊಂಡು ಮನೆ ಸುತ್ತ ಮುತ್ತಲಿನ ಪ್ರದೇಶಗಳನ್ನು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಜಿಲ್ಲೆಯಲ್ಲಿರುವ ನಕಲಿ ವೈದ್ಯರು, ಅಂಬ್ಯುಲೆನ್ಸ್ ಸಮಸ್ಯೆ ಮತ್ತು ಪಾವಗಡ ತಾಲ್ಲೂಕು ಆಸ್ಪತ್ರೆಯಲ್ಲಿ ಸಂಭವಿಸಿದ ಬಾಣಂತಿಯರ ಸಾವಿಗೆ ಸಂಭವಿಸಿದಂತೆ ಮಾಧ್ಯಮವರೊಂದಿಗೆ ಚರ್ಚಿಸಿದ ಅವರು ನಕಲಿ ವೈದ್ಯರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರಲ್ಲದೆ ರೋಗಿಗಳ ನೆರವಿಗಾಗಿ ಜಿಲ್ಲೆಯಲ್ಲಿ 42 ಅಂಬ್ಯುಲೆನ್ಸ್ಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.