ಬೆಂಗಳೂರು | ಮಂಡ್ಯ (Mandya)ಮಣ್ಣಿನ ಋಣ, ಗುಣವನ್ನು ಬಿಡಲ್ಲವೆಂದು ಸಂಸದೆ ಸುಮಲತಾ (Sumalatha) ಹೇಳಿದ್ದಾರೆ. ನನಗೆ ಬೇರೆ ಕಡೆ ಟಿಕೆಟ್ ಕೊಡುತ್ತೇವೆಂದು ಬಿಜೆಪಿ (BJP) ವರಿಷ್ಠರು ಹೇಳಿದ್ದರು. ಆದರೆ ನನಗೆ ಕೊಟ್ಟರೆ ಮಂಡ್ಯ ಟಿಕೆಟನ್ನೇ ಕೊಡಿ ಎಂದಿದ್ದೆ. ಮಂಡ್ಯ ಎಂದರೆ ನನಗೆ ಪ್ರೀತಿ, ಅಭಿಮಾನ, ಸ್ವಾಭಿಮಾನ. ಮಂಡ್ಯ ಜನ ನನ್ನ ಜತೆಗಿದ್ದರೆ ಅಂಬಿ (Ambi) ಅವರೇ ನನ್ನ ಜತೆಗಿದ್ದಂತೆ. ನನಗೆ ಯಾವುದೇ ಸ್ವಾರ್ಥವಿಲ್ಲ. ಸ್ವಾರ್ಥವಿದ್ದರೆ ನನಗೆ ಮಂಡ್ಯನೇ ಎಂದಿದ್ದಾರೆ.
ಬೆಂಗಳೂರಿನಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿ ಮಾತನಾಡಿದ ಅವರು, ನನ್ನ 5 ವರ್ಷಗಳ ರಾಜಕೀಯ ಜೀವನ ಆರಂಭ ಆಗಿದ್ದೇ ನಿಮ್ಮ ಪ್ರೀತಿಯಿಂದ ಎಂದು ಸಂಸದೆ ಸುಮಲತಾ ಭಾವುಕರಾಗಿದ್ದಾರೆ. ಬೆಂಬಲಕ್ಕೆ ಬಂದಿರುವ ಎಲ್ಲರಿಗೂ ತುಂಬು ಹೃದಯದ ಧನ್ಯವಾದ. ಇದೇ ಜನ ಬೆಂಬಲವೇ ನನಗೆ ಶಕ್ತಿ. ನನ್ನ ಕುಟುಂಬದ ಸೌಖ್ಯದ ಬಗ್ಗೆ ಎಂದೂ ಯೋಚನೆ ಮಾಡಲಿಲ್ಲ. ಆರಂಭಿಕವಾಗಿ ಹೇಳಿದಂತೆ ನುಡಿದಂತೆ ನಡೆದುಕೊಳ್ಳುತ್ತಿದ್ದೇನೆ. ಮಂಡ್ಯ ಜಿಲ್ಲೆಯ ಘನತೆಯನ್ನು ಸಂಸತ್ತಿನಲ್ಲೂ ಎತ್ತಿಹಿಡಿದಿದ್ದೇನೆ ಎಂದಿದ್ದಾರೆ.
ನಟ ಅಂಬರೀಶ್ ಪುತ್ರ ಅಭಿಷೇಕ್ ಮಾತನಾಡಿ, ನಾವು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ. ನನ್ನನ್ನು ನೋಡುವ ಕರ್ನಾಟಕದ ಜನ ‘ಈತ ಮಂಡ್ಯದ ಗಂಡಿನ ಮಗ’ ಎನ್ನುತ್ತಾರೆ. ನಮ್ಮ ತಾಯಿ ಕೂಡ ಜನಾಭಿಪ್ರಾಯ ತೆಗೆದುಕೊಂಡೇ ಮುನ್ನಡೆಯುತ್ತಿದ್ದಾರೆ. ಇನ್ನು ಮುಂದೆಯೂ ನಿಮ್ಮ ಈ ಪ್ರೀತಿ, ವಿಶ್ವಾಸ ಹೀಗೆಯೇ ಇರಲೆಂದು ಕೋರುತ್ತೇನೆ ಎಂದಿದ್ದಾರೆ.