ತುಮಕೂರು | ಜಿಲ್ಲೆಯಲ್ಲಿ ಅಕ್ರಮ ಮದ್ಯ ತಯಾರಿಕೆ (Illegal manufacture of liquor), ಸಾಗಾಣಿಕೆ, ಮಾರಾಟ ಪ್ರಕರಣಗಳ (Sales case) ಮೇಲೆ ನಿಗಾ ವಹಿಸುವಂತೆ ಮತ್ತು ಅಕ್ರಮ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಂಡು ಅಬಕಾರಿ ಕಾಯ್ದೆ (Excise Act) ಅಡಿ ಪ್ರಕರಣ ದಾಖಲಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ತುಮಕೂರು ಡಿಸಿ ಶುಭ ಕಲ್ಯಾಣ್ (Tumkur DC Shubha Kalyan) ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಅಕ್ರಮ ಮದ್ಯ, ಕಳ್ಳಬಟ್ಟಿ, ಸೇಂದಿ ತಯಾರಿಕೆ, ಮಾರಾಟ ಮತ್ತು ಸಾಗಾಣಿಕೆ ಮುಂತಾದವುಗಳನ್ನು ತಡೆಗಟ್ಟುವ ಕುರಿತಂತೆ ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಕ್ರಮವಾಗಿ ತಯಾರಿಸಲಾಗುವ ಸೇಂದಿ, ಕಳ್ಳಭಟ್ಟಿ ಕುರಿತಂತೆ ಅಬಕಾರಿ ಇಲಾಖೆಯ ಮಾಹಿತಿದಾರರಿಂದ ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಯಾವುದೇ ದಾಖಲಾತಿಗಳಿಲ್ಲದೆ ಅಕ್ರಮ ಮದ್ಯ ದಾಸ್ತಾನು ಇಟ್ಟುಕೊಂಡಿದ್ದಲ್ಲಿ ನಿಯಮಾನುಸಾರ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಸೂಚಿಸಿದರು.
ಅಬಕಾರಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ದಾಳಿ ನಡೆಸಬೇಕು. ಅಧಿಕಾರಿ, ಸಿಬ್ಬಂದಿಗಳು ಚಟುವಟಿಕೆಯಿಂದ ಕೆಲಸ ಮಾಡಬೇಕು. ಕೆಲಸ ಮಾಡದ ಸಿಬ್ಬಂದಿಗಳ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ತಿಳಿಸಿದರು.
ಚೆಕ್ ಪೋಸ್ಟ್ಗಳಲ್ಲದೆ ಇತರೆ ಕಾಲುದಾರಿಗಳಲ್ಲಿ ಮದ್ಯ ಸಾಗಾಣಿಕೆ ಪ್ರಕರಣಗಳನ್ನು ಪತ್ತೆಹಚ್ಚಬೇಕು. ಮಾಹಿತಿದಾರರಿಂದ ಮಾಹಿತಿಯನ್ನು ಪಡೆಯಬೇಕು. ಲೋಕಸಭಾ ಸಾರ್ವಜನಿಕ ಚುನಾವಣೆ 2024ರ ಹಿನ್ನೆಲೆಯಲ್ಲಿ ಮುಂದಿನ ವಾರ ಜಿಲ್ಲೆಗೆ ಸಾಮಾನ್ಯ ವೀಕ್ಷಕರು ಆಗಮಿಸಲಿದ್ದು, ಈ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಿಸುವಂತೆ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಅಬಕಾರಿ ದಾಳಿ ಪ್ರಕರಣ ಕಡಿಮೆ ಇದೆ. ಈ ವಾರದಲ್ಲಿ ತಂಡ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ಅಬಕಾರಿ ಉಪ ಆಯುಕ್ತ ಭರತೇಶ್ ಸೇರಿದಂತೆ ಅರಣ್ಯ ಅಧಿಕಾರಿಗಳು ಅಬಕಾರಿ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.