ತುಮಕೂರು | ಅವಕಾಶ ಸಿಕ್ಕಾಗಲೆಲ್ಲ ಸಂಸದ ಜಿ ಎಸ್ ಬಸವರಾಜು (GS Basavaraju) ವಿರುದ್ಧವಾಗಿ ಆಕ್ರೋಶ ವ್ಯಕ್ತಪಡಿಸುವ ಗುಬ್ಬಿ ವಿಧಾನಸಭಾ ಕ್ಷೇತ್ರದ (Gubbi Assembly Constituency) ಶಾಸಕ ಕೆಎಸ್ಆರ್ಟಿಸಿ ನಿಗಮದ ಅಧ್ಯಕ್ಷ ಎಸ್ ಆರ್ ಶ್ರೀನಿವಾಸ್ (SR Srinivas). ಇದೀಗ ಕೊಟ್ಟಿರುವಂತಹ ಒಂದು ಹೇಳಿಕೆ ತುಮಕೂರು (Tumkur) ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ತುಮಕೂರು ಲೋಕಸಭೆಯ ಹಿನ್ನೆಲೆಯಲ್ಲಿ ಅಭ್ಯರ್ಥಿಯ ಪ್ರಚಾರ ಮಾಡುವ ನಿಟ್ಟಿನಲ್ಲಿ ಕಾರ್ಯಕರ್ತರ ಸಭೆಯ ನಂತರ ಮಾತನಾಡಿದ ಶಾಸಕ ಎಸ್ ಆರ್ ಶ್ರೀನಿವಾಸ್ ರಾಜ್ಯದಲ್ಲಿ 26 ಬಿಜೆಪಿ ಸಂಸದರಿದ್ದಾರೆ ಎಲ್ಲರೂ ಕೂಡ ಪ್ರಧಾನಿ ನರೇಂದ್ರ ಮೋದಿ ಕಂಡರೆ ಗಡ ಗಡ ನಡುಗಿ ಹೆದರಿ ಎದುರಿಗೆ ಬಂದರೆ ಹುಚ್ಚೆ ಹುಯ್ಕೊಳ್ತಾರೆ ಅಂತಹವರನ್ನು ಆರಿಸಿ ಕಳಿಸಿದ್ದೀರಾ ಎಂದರು.
ತುಮಕೂರು ಸಂಸದ ಬಸವರಾಜು ಅವರು ಒಂದೇ ಒಂದು ದಿನ ಪಾರ್ಲಿಮೆಂಟಿನಲ್ಲಿ ಮಾತನಾಡಿದ ಉದಾಹರಣೆ ತೋರಿಸಿ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ ಎಂದು ಓಪನ್ ಚಾಲೆಂಜ್ ಮಾಡಿದ್ದಾರೆ. ಯಾವ ಪುರುಷಾರ್ಥಕ್ಕಾಗಿ ಅಂತಹವರನ್ನು ಕಳಿಸಿದ್ದೀರಾ..? ರಾಜ್ಯದ ಅಭಿವೃದ್ಧಿ ಆಗಬೇಕು ಅಂದರೆ ಮುದ್ದಹನುಮೇಗೌಡ್ರು ಗೆಲ್ಲಬೇಕು, ಮುದ್ದಹನುಮೇಗೌಡ್ರು ಪಾರ್ಲಿಮೆಂಟಿನಲ್ಲಿ ಮಾತನಾಡಿದ್ದಾರೆ. ನಮಗೆ ಬೇಕಾಗಿರುವುದು ಇಂತಹವರು. ನಪುಂಸಕರು ನಮಗೆ ಬೇಕಾಗಿಲ್ಲ ಎಂದು ನೇರವಾಗಿ ಬಸವರಾಜು ವಿರುದ್ಧ ಎಸ್ ಆರ್ ಶ್ರೀನಿವಾಸ್ ಕಿಡಿ ಕಾರಿದ್ದಾರೆ.
ಇಂದು ರಾಜ್ಯ ಭೀಕರ ಬರಗಾಲದಲ್ಲಿ ತತ್ತರಿಸಿ ಹೋಗಿದೆ. ಇಂತಹ ಬರಗಾಲವನ್ನು ಎದರಿಸುವುದಕ್ಕೆ 18000 ಕೋಟಿ ಕೇಂದ್ರ ಸರ್ಕಾರಕ್ಕೆ ಪರಿಹಾರ ಕೇಳಿರೋದು. ಇದುವರೆಗೂ ಒಂದು ಪೈಸೆ ಕೂಡ ಬಿಡುಗಡೆ ಮಾಡಿಲ್ಲ. ಈ ದೇಶ ಆಳ್ತಾ ಇರೋ ಸರ್ವಾಧಿಕಾರಿನ ಮೋದಿ..? ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರ ಪಾಲು ಕೊಡೋದು ಕೇಂದ್ರ ಸರ್ಕಾರದ ಕರ್ತವ್ಯ. ಈ ಕರ್ತವ್ಯ ನಿರ್ವಹಣೆ ಮಾಡುವುದರಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಕೇಂದ್ರ ಸರ್ಕಾರದ ಬಳಿ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಾಜ್ಯದ ಜನ ನಮಗೆ ಆಗಿರುವ ಅನ್ಯಾಯ ನೋಡಿ ಕೂಡ ಸುಮ್ಮನೆ ಇರೋಕೆ ಆಗುತ್ತಾ..? ಬಿಜೆಪಿ ಅವರಿಗೆ ಒಂದೇ ಅಜೆಂಡ ಜಾತಿ ಜಾತಿ, ಧರ್ಮ-ಧರ್ಮಗಳ ಸಂಘರ್ಷ ಉಂಟುಮಾಡುವುದು ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.
ಇನ್ನೂ ಬಿಜೆಪಿ ಅಭ್ಯರ್ಥಿ ಸೋಮಣ್ಣನವರ ನಾನು ಹರಿಯುವ ನೀರಿದ್ದಂತೆ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ವಿ ಸೋಮಣ್ಣ ಕೊಡುಗೆ ಏನು..? ಸ್ವಾಮೀಜಿ ಕಾಲಿಗೆ ಬಿದ್ದು ಬಿಟ್ಟರೆ ಬೇರೇನು ಇಲ್ಲ. ಸೋಮಣ್ಣ ನಾನು ನಿಂತ ನೀರಲ್ಲ ಹರಿಯೋ ನೀರು ಅಂದ್ರು ನೀವು ಎಲ್ಲಿಗೆ ಹರಿಯುತ್ತೀರಾ..? ನೀವು ಚಾಮರಾಜಪೇಟೆಯಲ್ಲಿ ಹುಟ್ಟಿ ಚಾಮರಾಜನಗರಕ್ಕೆ ಬಂದ್ರಿ, ಅಲ್ಲಿಂದ ಸಿದ್ದರಾಮಯ್ಯನ ಕ್ಷೇತ್ರ ವರುಣಾಗೆ ಹೋದ್ರಿ, ಈಗ ತುಮಕೂರಿಗೆ ಹರಿದುಕೊಂಡು ಬಂದುಬಿಟ್ಟಿದ್ದೀರಾ ಹರಿಯುವ ನೀರು ಯಾರಿಗೂ ಉಪಯೋಗ ಆಗೋಲ್ಲ ಎಂದು ವಿ ಸೋಮಣ್ಣ ಹೇಳಿಕೆಗೆ ಟಾಂಟ್ ಕೊಟ್ಟಿದ್ದಾರೆ.