ತುಮಕೂರು | ತುಮಕೂರು (Tumkur) ಲೋಕಸಭಾ ಚುನಾವಣೆಯ (Lok Sabha Elections) ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಗೃಹ ಸಚಿವ ಡಾ. ಜಿ ಪರಮೇಶ್ವರ್ (Dr. G. Parameshwar) ಆಪ್ತ ಮುರಳೀಧರ ಹಾಲಪ್ಪ (Muralidhar Halappa) ಮಾಧ್ಯಮಗಳ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ನಿರಂತರವಾಗಿ ಪಕ್ಷ ಕಟ್ಟುವ ಕೆಲಸ ಮಾಡಿಕೊಂಡು ಬಂದಿದ್ದೆ. ಟಿಕೆಟ್ ಸಿಗುತ್ತದೆ ಎಂಬ ಆಶಾಭಾವನೆ ಇತ್ತು. ಆದರೆ ಪಕ್ಷ ಈಗ ಮತ್ತೊಬ್ಬರ ಬಗ್ಗೆ ತೀರ್ಮಾನ ತೆಗೆದುಕೊಂಡಿದೆ. ಅವರಿಗೆ ಅನುಭವ ಇದೆ ಎಲ್ಲಾ ಪಕ್ಷದ ವ್ಯವಸ್ಥೆಯನ್ನು ಅಧ್ಯಯನ ಮಾಡಿದ್ದಾರೆ. ಅಘಾದವಾದ ಅನುಭವ ಇದೆ ಆ ಆಯಾಮದಲ್ಲಿ ಟಿಕೆಟ್ ಘೋಷಣೆ ಮಾಡಿದ್ದಾರೆ ಎಂದು ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.
ಇನ್ನು ಡಾ. ಜಿ ಪರಮೇಶ್ವರ್, ಡಿ ಕೆ ಶಿವಕುಮಾರ್, ಕೆ ಎನ್ ರಾಜಣ್ಣ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆಯೋ ಅದಕ್ಕೆ ನಾನು ಬದ್ಧನಾಗಿದ್ದೇನೆ. ನಾನು ಒಬ್ಬ ಸಾಮಾನ್ಯ ಮನುಷ್ಯ ನೋವಾಗುವುದು ಸಹಜ. ಕೆಲಸ ಮಾಡಿದೆ ಅವಮಾನಗಳನ್ನು ಸಹಿಸಿಕೊಂಡಿದ್ದೆ, ವ್ಯಂಗ್ಯ ಮೂದಲಿಕೆಯನ್ನು ಸಹಿಸಿಕೊಂಡಿದ್ದೆ ಮುಂದೆ ಫಲ ಸಿಗಲಿದೆ ಎಂಬ ಪ್ರಬಲವಾದ ನಂಬಿಕೆ ಇತ್ತು. ನನಗೆ ಪಕ್ವತೆ ಬರಲಿ ಎಂದು ಕೈ ಬಿಟ್ಟಿರಬಹುದು. ಆದರೆ ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.
ಮುದ್ದಹನುಮೇಗೌಡರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದ್ದರು. ಹಾಗಾಗಿ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರಿಗೆ ಅಸಮಾಧಾನ ಇತ್ತು. ಸಾಮಾನ್ಯ ಕಾರ್ಯಕರ್ತರಿಗೂ ಅಸಮಾಧಾನ ಇತ್ತು. ಇದೆ ಭಾನುವಾರ ಕೆ ಸಿ ವೇಣುಗೋಪಾಲ್, ಸುರ್ಜೆವಾಲ ಅವರು ಬಂದು ಭೇಟಿಯಾಗಲು ಹೇಳಿದ್ದಾರೆ ಅವರು ಸಲಹೆ ಕೊಟ್ಟಂತೆ ನಾನು ನಡೆಯುತ್ತೇನೆ ಎಂದು ಮುರುಳೀಧರ ಹಾಲಪ್ಪ ಹೇಳಿದ್ದಾರೆ.