ತುಮಕೂರು | ತುಮಕೂರು (Tumkur) ನಗರದಲ್ಲಿ ಒಂದು ಕೇಸರಿ ಧ್ವಜ (saffron flag) ಕಟ್ಟುವುದಕ್ಕೂ ರೂಲ್ಸ್ ಮಾಡಿದ್ದಾರೆ. ಬೆಳಗ್ಗೆ ಎದ್ದರೆ ಸಾಕು ಇಂತಹದ್ದನ್ನೆಲ್ಲ ನೋಡಿ ಸಾಕಾಗಿ ಹೋಗಿದೆ ಎಂದು ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ (Jyoti Ganesh) ಕಾಂಗ್ರೆಸ್ ಸರ್ಕಾರದ (Congress Govt) ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತುಮಕೂರು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದಿಂದ ಭಯೋತ್ಪಾದಕರನ್ನು ಕರೆದುಕೊಂಡು ಬಂದು ಡಿಜಿ, ಐಜಿ, ಪೊಲೀಸರನ್ನು ಮಾಡಿ ಆಡಳಿತ ನಡೆಸುತ್ತಾರೆ. ತುಮಕೂರು ನಗರದಲ್ಲಿ ಒಂದು ಕೇಸರಿಯ ಬಾವುಟ ಕಟ್ಟುವುದಕ್ಕೂ ತಡೆ ಮಾಡುತ್ತಾರೆ. ಆದರೆ ಬೇರೆಯವರಿಗೆ ಯಾವುದೇ ರೀತಿಯಾದಂತಹ ಅಡೆ-ತಡೆ ಇರುವುದಿಲ್ಲ ಎಂದು ಕಿಡಿ ಕಾರಿದ್ದಾರೆ.
ನಾವು ಯಾವತ್ತೂ ದೇಶ ವಿರೋಧಿ ರಾಷ್ಟ್ರ ವಿರೋಧಿ ಮಾತನಾಡಿಲ್ಲ, ಕಾನೂನನ್ನು ಕೈಗೆತ್ತಿಕೊಂಡಿಲ್ಲ. ಆದರೆ ತುಮಕೂರು ನಗರದಲ್ಲಿ ವಾತಾವರಣ ಬದಲಾಗಿದ್ದು ಹಿಂದೂಗಳಿಗೆ ಒಂದು ನ್ಯಾಯ ಬೇರೆಯವರಿಗೆ ಒಂದು ನ್ಯಾಯ ಎನ್ನುವಂತಾಗಿದೆ. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಹೋರಾಟದ ಹಾದಿಯನ್ನು ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.