ಕೃಷಿ ಮಾಹಿತಿ | ಜಿಲ್ಲೆಯಲ್ಲಿ ಉತ್ತಮ ಜಲಸಂಪನ್ಮೂಲಗಳಿದ್ದು, ಇಲಾಖಾಧಿಕಾರಿಗಳ ಮಾರ್ಗದರ್ಶನ ಪಡೆದು ಕೆರೆಗಳ ಅಂಚಿನಲ್ಲಿ ಕೊಳ ನಿರ್ಮಾಣ ಮಾಡಿ ಹೆಚ್ಚು ಮೀನುಮರಿ ಪಾಲನೆ ಮಾಡುವಂತೆ ರೈತರಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಪ್ರಭು ಕರೆ ನೀಡಿದರು.
ಮೀನುಗಾರಿಕೆ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ನಾಗವಲ್ಲಿಯಲ್ಲಿ ಆಯೋಜಿಸಿದ್ದ 65ನೇ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ವರ್ಷ ಕಾರ್ಯಕ್ರಮವನ್ನು ಪ್ರೊಫೆಸರ್ ಡಾ|| ಹೀರಾಲಾಲ್ ಚೌಧರಿ ಮತ್ತು ಅವರ ಸಹೋದ್ಯೋಗಿಗಳ ಸ್ಮರಣಾರ್ಥವಾಗಿ 10 ಜುಲೈ 1957 ರಂದು ದೇಶದಲ್ಲಿ ಮೊದಲನೆ ಬಾರಿಗೆ ಪ್ರಮುಖ ಕಾರ್ಪ್ ಮೀನು ತಳಿಗಳಲ್ಲಿ ಪ್ರಚೋದಿತ ಸಂತಾನೋತ್ಪತ್ತಿಯನ್ನು ಸಾಧಿಸುವಲ್ಲಿ ಅವರ ಕೊಡುಗೆಗಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ೪೦೦ ಕ್ಕೂ ಹೆಚ್ಚು ಇಲಾಖೆ ಕೆರೆಗಳಿದ್ದು, ಹೆಚ್ಚು ಮೀನು ಉತ್ಪಾದನೆ ಮಾಡಿ ಜಿಲ್ಲೆಯನ್ನು ಪ್ರಥಮ ಸ್ಥಾನಕ್ಕೆ ತರಲು ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಾಗವಲ್ಲಿ ಕೆರೆಯ ಮೀನು ಪಾಲನೆ ಹಕ್ಕನ್ನು ಇ-ಟೆಂಡರ್ ಮೂಲಕ ಪಡೆದುಕೊಂಡಿರುವ ಕೃಷಿಕ ಯುವರಾಜ್ ಕೆರೆಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ನಾಗವಲ್ಲಿ ಕೆರೆಯಲ್ಲಿ ಬಿತ್ತನೆಗೆ ಉತ್ತಮ ಗಾತ್ರದ ಮೀನುಮರಿಗಳು ಅಗತ್ಯವಿದ್ದುದರಿಂದ ಇಲಾಖೆ ಮಾರ್ಗದರ್ಶನದಂತೆ ನಾಗವಲ್ಲಿ ಕೆರೆಯ ಅಂಚಿನಲ್ಲಿ ಸುಮಾರು 1.5 ಹೆಕ್ಟೇರ್ ವಿಸ್ತೀರ್ಣದ ಕೊಳಗಳನ್ನು ನಿರ್ಮಾಣ ಮಾಡಿ ಉತ್ತಮ ತಳಿಯ ಮೀನು ಮರಿಗಳನ್ನು ಪಾಲನೆ ಮಾಡಿರುತ್ತಾರೆ. ಕೊಳಗಳಲ್ಲಿ ಸಾಕಾಣಿಕೆ ಮಾಡಿರುವ ಮೀನುಮರಿಗಳನ್ನು ವೀಕ್ಷಿಸಿದರು.
ಕಡಿಮೆ ವೆಚ್ಚದಲ್ಲಿ ಕೆರೆಗಳಲ್ಲಿ ಉತ್ತಮ ಗಾತ್ರದ ಮೀನುಮರಿಗಳನ್ನು ದಾಸ್ತಾನು ಮಾಡಿ ಹೆಚ್ಚು ಮೀನು ಉತ್ಪಾದನೆ ಮಾಡಲು ಪ್ರೋತ್ಸಾಹಿಸಲು ಮೀನುಗಾರಿಕೆ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಸದಾ ನಿಮ್ಮೊಂದಿಗೆ ಇದ್ದು, ಉತ್ತಮ ಮಾರ್ಗದರ್ಶನ, ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮೀನುಗಾರಿಕೆ ಉಪ ನಿರ್ದೇಶಕ ಶಿವಶಂಕರ್.ಎ.ಸಿ., ತುಮಕೂರು ಜಿಲ್ಲೆಯ ಎಲ್ಲಾ ಸಹಾಯಕ ನಿರ್ದೇಶಕರು, ಸಿಬ್ಬಂದಿಗಳು, ಮೀನುಗಾರರ ಸಹಕಾರ ಸಂಘ ಹಾಗೂ ಮೀನು ಕೃಷಿ ಉತ್ಪಾದಕರ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಸುಮಾರು ೨೦೦ಕ್ಕೂ ಹೆಚ್ಚು ಮೀನು ಕೃಷಿಕರು ಉಪಸ್ಥಿತರಿದ್ದರು.