ನವದೆಹಲಿ | 2024ರ ಲೋಕಸಭೆ ಚುನಾವಣೆ (2024 Lok Sabha Elections) ಯಾವಾಗಿನಿಂದ ಆರಂಭವಾಗುತ್ತದೆ ಎಂದು ಕಾತುರದಿಂದ ಎದುರು ನೋಡುತ್ತಿದ್ದ ರಾಜಕೀಯ ಪಕ್ಷಗಳಿಗೆ (Political Party) ಚುನಾವಣೆ ಆಯೋಗ (Election Commission) ಸಿಹಿ ಸುದ್ದಿ ನೀಡಿದೆ. ಪ್ರಜಾಪ್ರಭುತ್ವದ ಮಹಾ ಹಬ್ಬ, ರಾಜಕೀಯ ಪಕ್ಷಗಳ ಚುನಾವಣೆ ಸಮರ 2024ರ ಲೋಕಸಭೆ ಚುನಾವಣೆ (2024 Lok Sabha Elections) ಯಾವಾಗ ಆರಂಭವಾಗಿ ಯಾವಾಗ ಮುಕ್ತಾಯವಾಗುತ್ತದೆ ಎನ್ನುವ ವಿಚಾರವನ್ನು ಚುನಾವಣೆ ಆಯೋಗ ತಿಳಿಸಿದೆ.
ಹೌದು,, ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಪ್ರತಿಯೊಂದು ಚುನಾವಣೆಯು ನಮಗೆ ಪರೀಕ್ಷೆ ಇದ್ದಂತೆ, ಮುಕ್ತ, ನ್ಯಾಯಸಮ್ಮತ, ಪಾರದರ್ಶಕ ಚುನಾವಣೆ ನಮ್ಮ ಉದ್ದೇಶವಾಗಿದೆ. ಅದನ್ನು ಯಶಸ್ವಿಯಾಗಿ ನಡೆಸಲು ನಾವು ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದು ದೇಶದ ಜನರಿಗೆ ತಿಳಿಸಿದ್ದಾರೆ.
ದೇಶದಲ್ಲಿ 97 ಕೋಟೆ ಮತದಾರರು
ದೇಶಾದ್ಯಂತ ಒಟ್ಟು 97 ಕೋಟಿ ಮತದಾರರು ಮತ ಚಲಾಯಿಸಲಿದ್ದು, ಇದರಲ್ಲಿ 1.8 ಕೋಟಿ ಮತದಾರರು ಮೊದಲ ಬಾರಿಗೆ ಮತಚಲಾಯಿಸುತ್ತಿದ್ದಾರೆ. 49.7 ಕೋಟಿ ಪುರುಷರು, 47.1 ಕೋಟಿ ಮಹಿಳೆಯರು. 48 ಸಾವಿರ ತೃತೀಯ ಲಿಂಗಿಗಳು, 85 ವರ್ಷ ಮೇಲ್ಪಟ್ಟ 82 ಲಕ್ಷ ಮತದಾರರು. 19.74 ಕೋಟಿ ಯುವ ಮತದಾರರು ಮತ ಚಲಾಯಿಸಲಿದ್ದಾರೆ. 12 ರಾಜ್ಯಗಳಲ್ಲಿ ಪುರುಷ ಮತದಾರಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ.
17 ನೇ ಲೋಕಸಭೆ ಅವಧಿ 16 ಜೂನ್ 2024 ರಂದು ಮುಕ್ತಾಯ
ದೇಶಾದ್ಯಂತ 10.5 ಲಕ್ಷ ಮತದಾನ ಕೇಂದ್ರಗಳು ಇದ್ದು, ಚುನಾವಣಾ ಕರ್ತವ್ಯಕ್ಕೆ ಒಂದೂವರೆ ಕೋಟಿ ಸಿಬ್ಬಂದಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮತದಾನಕ್ಕೆ ಒಟ್ಟು 55 ಲಕ್ಷ ಇವಿಎಂಗಳ ವ್ಯವಸ್ಥೆ ಮಾಡಲಾಗುತ್ತದೆ. 17 ನೇ ಲೋಕಸಭೆಯ ಅವಧಿಯು 16 ಜೂನ್ 2024 ರಂದು ಮುಕ್ತಾಯಗೊಳ್ಳಲಿದೆ. ಆಂಧ್ರಪ್ರದೇಶ, ಒಡಿಶಾದ ಶಾಸನ ಸಭೆಗಳ ಅವಧಿ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ಕೂಡ ಜೂನ್ 2024 ರಲ್ಲಿ ಮುಕ್ತಾಯಗೊಳ್ಳಲಿದೆ.
85 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ವ್ಯವಸ್ಥೆ
ಮತದಾನ ಕೇಂದ್ರಗಳಲ್ಲಿ ನೀರು, ಶೌಚಾಲಯ, ಹೆಲ್ಪ್ಡೆಸ್ಕ್, ವಿದ್ಯುತ್ ಸೇರಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗುತ್ತದೆ. 85 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. 40%ಕ್ಕೂ ಹೆಚ್ಚು ದಿವ್ಯಾಂಗರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಮತದಾನ ಕೇಂದ್ರಗಳಲ್ಲಿ ವ್ಹೀಲ್ಚೇರ್ ವ್ಯವಸ್ಥೆ ಇರಲಿದ್ದು, ಸ್ವಯಂಸೇವಕರೂ ಇರಲಿದ್ದಾರೆ.
ಚುನಾವಣಾ ಅಕ್ರಮಗಳನ್ನು ಮತದಾರ ಬಯಲು ಮಾಡಬಹುದು
ಆ್ಯಪ್ ಮೂಲಕ ತಮ್ಮ ಅಭ್ಯರ್ಥಿಗಳ ಮಾಹಿತಿ ಲಭ್ಯ ಇರಲಿದೆ. ಅಭ್ಯರ್ಥಿಗಳ ಅಪರಾಧ ಪ್ರಕರಣಗಳ ಕುರಿತು ಮಾಹಿತಿ ಆ್ಯಪ್ನಲ್ಲಿರಲಿದೆ. ಚುನಾವಣಾ ಅಕ್ರಮಗಳನ್ನು ಮತದಾರ ಬಯಲು ಮಾಡಬಹುದು. ಆ್ಯಪ್ ಮೂಲಕ ಅಕ್ರಮದ ಫೋಟೋ, ವಿಡಿಯೋ ಅಪ್ಲೋಡ್ ಮಾಡಬಹುದು. ಕೂಡಲೇ ಅಕ್ರಮ ಎಸಗುವ ಅಭ್ಯರ್ಥಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ. ಚುನಾವಣೆಯಲ್ಲಿ ಹಿಂಸೆಗೆ ಅವಕಾಶ ನೀಡಲ್ಲ. ಎಲ್ಲಾ ಕಡೆ ಚೆಕ್ಪೋಸ್ಟ್ ಇರಲಿವೆ, ಡ್ರೋನ್ ಮೂಲಕ ಕಣ್ಗಾವಲು ಇರಿಸಲಾಗುತ್ತದೆ. 24 ಗಂಟೆಗಳ ಕಂಟ್ರೋಲ್ ರೂಂಗಳು ಕರ್ತವ್ಯ ನಿರ್ವಹಿಸಲಿವೆ. ಸಿಆರ್ಪಿಎಫ್ ತುಕಡಿಗಳನ್ನು ನಿಯೋಜನೆ ಮಾಡಲಾಗುತ್ತದೆ. ರೌಡಿಶೀಟರ್ಗಳ ಮೇಲೂ ತೀವ್ರ ನಿಗಾ ಇಡಲಾಗುತ್ತದೆ. ಅಂತರಾಷ್ಟ್ರೀಯ ಗಡಿಯಲ್ಲೂ ಡ್ರೋಣ್ ಮೂಲಕ ಕಣ್ಗಾವಲು ಇರಿಸಲಾಗುತ್ತದೆ.
ಕ್ರಿಮಿನಲ್ ಹಿನ್ನೆಲೆ ಇರುವ ವ್ಯಕ್ತಿಗಳು ಇದ್ದರೆ ಮಾಹಿತಿ ನೀಡಿ, ಸ್ಥಳಿಯ ಪತ್ರಿಕೆಗಳು ಮತ್ತು ಟಿವಿಗಳಲ್ಲಿ ಮಾಹಿತಿ ನೀಡಬಹುದಾಗಿದೆ. ಮತಗಟ್ಟೆಗಳಲ್ಲಿ ಹಿಂಸಾಚಾರ ನಡೆದರೆ ಜಾಮೀನು ರಹಿತ ಕೇಸ್ ದಾಖಲು ಮಾಡಲಾಗುತ್ತದೆ.
ಕಟ್ಟುನಿಟ್ಟಿನ ತಪಾಸಣೆ ಮತ್ತು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ
ರೈಲ್ವೆ ಸ್ಟೇಷನ್, ಏರ್ಪೋರ್ಟ್, ಹೆಲಿಕಾಪ್ಟರ್, ಖಾಸಗಿ ವಿಮಾನ ಸೇರಿದಂತೆ ಎಲ್ಲಾ ವಾಹನಗಳಲ್ಲೂ ಕೂಡ ತಪಾಸಣೆ ನಡೆಸಲಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಫೇಕ್ ಸುದ್ದಿಗಳ ಮೇಲೂ ನಿಗಾ ಇಡಲಾಗುತ್ತದೆ. ಅಭ್ಯರ್ಥಿಗಳನ್ನು ಹೊಗಳಲು ಅವಕಾಶವಿದೆ. ಆದರೆ ಸುಳ್ಳು ಸುದ್ದಿಗಳ ಮೂಲಕ ತೆಗಳಲು ಅವಕಾಶವಿಲ್ಲ. ಅನುಮಾನಾಸ್ಪದ ವಹಿವಾಟುಗಳ ಬಗ್ಗೆ ಮಾಹಿತಿ ನೀಡಬೇಕು. ಎಲ್ಲ ಬ್ಯಾಂಕ್ಗಳು ದೈನಂದಿನ ವರದಿಗಳನ್ನು ಕಳುಹಿಸಬೇಕು.
ಜಾತಿ ಅಥವಾ ಧಾರ್ಮಿಕ ವಿಷಯದ ಮೂಲಕ ಮತಯಾಚನೆ ಮಾಡುವಂತಿಲ್ಲ
ದ್ವೇಷದ ಭಾಷಣಗಳಿಗೆ ಅವಕಾಶವಿಲ್ಲ. ಯಾವುದೇ ಜಾತಿ ಅಥವಾ ಧಾರ್ಮಿಕ ವಿಷಯದ ಮೂಲಕ ಮತಯಾಚನೆ ಮಾಡುವಂತಿಲ್ಲ. ಖಾಸಗಿ ಜೀವನದ ಯಾವುದೇ ಅಂಶವನ್ನು ಟೀಕಿಸುವುದಿಲ್ಲ. ಪರಿಶೀಲಿಸದ ಮತ್ತು ತಪ್ಪುದಾರಿಗೆಳೆಯುವ ಜಾಹೀರಾತು ಪ್ರಕಟಿಸಬಾರದು. ಪಕ್ಷದ ಜಾಹೀರಾತುಗಳನ್ನು ಸುದ್ದಿಯಾಗಿ ನೀಡುವಂತಿಲ್ಲ. ಪ್ರತಿಸ್ಪರ್ಧಿಗಳನ್ನು ನಿಂದಿಸುವ/ಅವಮಾನಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್ಗಳ ಮೇಲೆ ನಿರ್ಬಂಧ ಹೇರಲಾಗುತ್ತದೆ. ಸ್ಟಾರ್ ಪ್ರಚಾರಕರು ಪ್ರಚಾರದ ಗೌರವ ಕಾಪಾಡಿಕೊಳ್ಳಬೇಕು. ಚುನಾವಣಾ ಪ್ರಚಾರದಲ್ಲಿ ಮಕ್ಕಳನ್ನು ಬಳಸುವಂತಿಲ್ಲ.
543 ಲೋಕಸಭಾ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಚುನಾವಣೆ
ದೇಶದ 543 ಲೋಕಸಭಾ ಕ್ಷೇತ್ರಗಳಿಗೆ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 19 ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಗೊಳ್ಳಲಿದೆ. ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ದಕ್ಷಿಣ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯಲಿದ್ದು, ಉತ್ತರ ಕರ್ನಾಟಕ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ರಾಜ್ಯದಲ್ಲಿ ಏಪ್ರಿಲ್ 26 ರಂದು ಮೊದಲ ಹಂತದ ಮತದಾನ ಪ್ರಕ್ರಿಯೆ ನಡೆಯಲಿದ್ದು, ಎರಡನೇ ಹಂತದ ಮತದಾನ ಮೇ 7 ರಂದು ನಡೆಯಲಿದೆ.
7 ಹಂತದ ಮತದಾನದ ದಿನಾಂಕ ಮತ್ತು ಮತದಾನದ ನಡೆಯುವ ಕ್ಷೇತ್ರಗಳ ಸಂಖ್ಯೆ
ಏಪ್ರಿಲ್ 19 ರಂದು ಮೊದಲ ಹಂತದಲ್ಲಿ 102 ಕ್ಷೇತ್ರಗಳಿಗೆ ಮತದಾನ
ಏಪ್ರಿಲ್ 26 ರಂದು ಎರಡನೇ ಹಂತದಲ್ಲಿ 89 ಕ್ಷೇತ್ರಗಳಿಗೆ ಮತದಾನ
ಮೇ 7 ರಂದು ಮೂರನೇ ಹಂತದಲ್ಲಿ 94 ಲೋಕಸಭಾ ಕ್ಷೇತ್ರಗಳಿಗೆ ಮತದಾನ
ಮೇ 13 ರಂದು ನಾಲ್ಕನೇ ಹಂತದಲ್ಲಿ 96 ಲೋಕಸಭಾ ಕ್ಷೇತ್ರಗಳಿಗೆ ಮತದಾನ
ಮೇ 20 ರಂದು ಐದನೇ ಹಂತದಲ್ಲಿ 49 ಲೋಕಸಭಾ ಕ್ಷೇತ್ರಗಳಿಗೆ ಮತದಾನ
ಮೇ 25 ರಂದು ಆರನೇ ಹಂತದಲ್ಲಿ 56 ಲೋಕಸಭಾ ಕ್ಷೇತ್ರಗಳಿಗೆ ಮತದಾನ
ಜೂನ್ 1 ರಂದು ಏಳನೇ ಹಂತದಲ್ಲಿ 57 ಲೋಕಸಭಾ ಕ್ಷೇತ್ರಗಳಿಗೆ ಮತದಾನ
ಜೂನ್ 4 ರಂದು ಮತ ಎಣಿಕೆ, ಫಲಿತಾಂಶ ಪ್ರಕಟ
ಕರ್ನಾಟಕದಲ್ಲಿ ಮತದಾನ ನಡೆಯುವ ದಿನಾಂಕ ಮತ್ತು ಕ್ಷೇತ್ರಗಳು
ಏಪ್ರಿಲ್ 26 ರಂದು ಚಿತ್ರದುರ್ಗ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ ಒಟ್ಟು 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಮೇ 7 ರಂದು ಬೆಳಗಾವಿ, ಬಳ್ಳಾರಿ, ಚಿಕ್ಕೋಡಿ, ಹಾವೇರಿ-ಗದಗ, ಕಲಬುರಗಿ, ಬೀದರ್, ಹುಬ್ಬಳಿ – ಧಾರವಾಡ, ಕೊಪ್ಪಳ, ರಾಯಚೂರು, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ, ಬಾಗಲಕೋಟೆ, ವಿಜಯಪುರ ಒಟ್ಟು 14 ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ.